ಕೊನೆಯುಸಿರೆಳೆದ ಮಾಜಿ ಸಂಸದೆ ಚಂದ್ರಪ್ರಭಾ ಅರಸ್

ಬುಧವಾರ, 4 ಮೇ 2016 (08:57 IST)
ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸರ ಪುತ್ರಿ  ಚಂದ್ರಪ್ರಭಾ ಅರಸ್ (70) ಮಂಗಳವಾರ ಸಂಜೆ 5.55ರ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು. ಮಾಜಿ ಸಚಿವೆ, ಮಾಜಿ ಸಂಸದೆಯೂ ಆಗಿದ್ದ ಅವರು 2011ರಲ್ಲಿ ರಸ್ತೆ ಅಪಘಾತವೊಂದರಲ್ಲಿ  ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕಳೆದ ಏಪ್ರಿಲ್ 25 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ. 
 
ಅವರು ಪುತ್ರ ಮಂಜುನಾಥ್ ಅರಸ್,  ಪುತ್ರಿ ಅನುಪಮಾ ಅರಸ್ ಮತ್ತು ಮೊಮ್ಮಕ್ಕಳನ್ನು  ಅಗಲಿದ್ದಾರೆ. 
 
ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಮಾರ್ಗದರ್ಶನದಲ್ಲಿ ರಾಜಕೀಯಕ್ಕಿಳಿದ ಅವರು 1983ರಲ್ಲಿ ಕ್ರಾಂತಿರಂಗ ಪಕ್ಷದಿಂದ ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಕೆಲುವು ಸಾಧಿಸಿದ್ದರು. ರಾಮಕೃಷ್ಣ ಹೆಗಡೆ ಸರ್ಕಾರಗಲ್ಲಿ ಅಬಕಾರಿ, ರೇಷ್ಮೆ, ಸಮಾಜ ಕಲ್ಯಾಣ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು.
 
ಬಳಿಕ ಕಾಂಗ್ರೆಸ್‌ ಸೇರಿದ್ದ ಅವರು 1991ರಲ್ಲಿ ಸಂಸದರಾಗಿ ಗೆಲುವನ್ನು ಕಂಡಿದ್ದರು. 
 
ಚಂದ್ರಪ್ರಭಾ ಅರಸರ ಅಂತ್ಯಕ್ರಿಯೆ ಹುಣಸೂರು ತಾಲೂಕಿನ ಸ್ವಗ್ರಾಮ ಅರಸು ಕಲ್ಲಹಳ್ಳಿಯಲ್ಲಿ  ಇಂದು ಸಂಜೆ  ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಲಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.  

ವೆಬ್ದುನಿಯಾವನ್ನು ಓದಿ