ಬನ್ನೇರುಘಟ್ಟ ಉದ್ಯಾನವನದ ಬೋನಿನಿಂದ ಚಿರತೆ ತಪ್ಪಿಸಿಕೊಂಡಿದ್ದು ಹೇಗೆ?

ಸೋಮವಾರ, 15 ಫೆಬ್ರವರಿ 2016 (12:02 IST)
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ  ಭಾನುವಾರ ತಡರಾತ್ರಿ ಬೋನಿನಿಂದ ತಪ್ಪಿಸಿಕೊಂಡ ಚಿರತೆಗಾಗಿ  ಶೋಧ ಕಾರ್ಯಾಚರಣೆ ಅರಣ್ಯದ ಸುತ್ತಮುತ್ತ ನಡೆಯುತ್ತಿದೆ. ಫೆ. 7ರಂದು ವಿಬ್‌ಗಯಾರ್ ಶಾಲೆಗೆ ನುಗ್ಗಿದ್ದ ಚಿರತೆ ಹಲವರನ್ನು ಗಾಯಗೊಳಿಸಿದ ಬಳಿಕ ಸೆರೆಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇರಿಸಲಾಗಿತ್ತು. ಆದರೆ ಇಂದು ಬೋನಿನಲ್ಲಿದ್ದ ಚಿರತೆ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ತೀವ್ರವಾಗಿ ನಡೆಯುತ್ತಿದೆ.

ಚಿರತೆಯನ್ನು ಹುಲಿಯ ಬೋನಿನಲ್ಲಿ ಇಟ್ಟಿದ್ದೇ ಚಿರತೆ ತಪ್ಪಿಸಿಕೊಳ್ಳಲು ಸುಲಭವಾಯಿತೆಂದು ಹೇಳಲಾಗುತ್ತಿದೆ. 
ಬೋನಿನ ಮೇಲ್ಭಾಗದಲ್ಲಿದ್ದ ವೈರ್ ಚಿರತೆ ಎಳೆದಿದ್ದರಿಂದ ಬೋನಿನ  ದ್ವಾರ  ಸ್ವಯಂಚಾಲಿತವಾಗಿ ತೆರೆದುಕೊಂಡು ಪ್ರಾಣಿಗಳಿಗೆ ಆಹಾರ ಇಟ್ಟಿರುವ ಬೋನಿನ ಇನ್ನೊಂದು ಬದಿಗೆ ಬರುತ್ತದೆ. ಈ ಬದಿಯಲ್ಲಿನ ಕಂಬಿಗಳು ಅಗಲವಾಗಿರುವುದರಿಂದ ಇದರೊಳಗೆ ತೂರಿದ ಚಿರತೆ  ಹೊರಕ್ಕೆ ಹೋಗಿದೆ. ಆವರಣದಲ್ಲಿ ಚಿರತೆ ಅಡ್ಡಾಡುತ್ತಿರುವುದನ್ನು ನೋಡಿದ ಅರಣ್ಯ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಷ್ಟರಲ್ಲಿ ಚಿರತೆ 10 ಅಡಿ  ಎತ್ತರದ ತಡೆಗೋಡೆಯನ್ನು ಹಾರಿ ಅಲ್ಲಿಂದ   ತಪ್ಪಿಸಿಕೊಂಡು ಹೋಗಿರಬಹುದೆಂದು ಉದ್ಯಾನವನದ ಅಧಿಕಾರಿಗಳು ಶಂಕಿಸಿದ್ದಾರೆ.

ಹಿಂದೆಯೂ ಇದೇ ರೀತಿ ಹಲವಾರು ಪ್ರಾಣಿಗಳು ತಪ್ಪಿಸಿಕೊಂಡು ಹೋಗಿದ್ದವು. ಒಟ್ಟಿನಲ್ಲಿ ಚಿರತೆ ತಪ್ಪಿಸಿಕೊಳ್ಳುವುದರಲ್ಲಿ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ.  ಬನ್ನೇರುಘಟ್ಟ ಅರಣ್ಯದ ಸುತ್ತಮುತ್ತ, ಬೇಗಿಹಳ್ಳಿಕೊಪ್ಪ, ಬೈರನಹಳ್ಳಿ ಬಳಿ ಚಿರತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ