ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ: ತಡೆಯಾಜ್ಞೆ ನೀಡಿದ ಹೈಕೋರ್ಟ್‌

ಬುಧವಾರ, 4 ಮಾರ್ಚ್ 2015 (13:22 IST)
ನಗರದಲ್ಲಿ ಮತ್ತೆ ಜೆಸಿಬಿಗಳ ಹವಾ ಜೋರಾಗಿದ್ದು, ಇಂದು ನಗರದ ಕಂಗೇರಿ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಜಾಗದಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಕಟ್ಟಡಗಳನ್ನು ಉರುಳಿಸಲು ಮುಂದಾಗಿದ್ದವು. ಆದರೆ ಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಬಿಡಿಎ ಯಥಾ ಸ್ಥಿತಿಯನ್ನು ಕಾಯ್ದುಕೊಂಡಿದೆ.
 
ನಗರದ ಕೆಂಗೇರಿಯಲ್ಲಿನ ಶಿರ್ಕೆ ಎಂಬ ಅಪಾರ್ಟ್ ಮೆಂಟ್ ಬಳಿ ಇದ್ದ ಸರ್ವೇ ನಂಬರ್ 26/03ರಲ್ಲಿದ್ದ 2.5 ಎಕರೆ ಸಾರ್ವಜನಿಕ ಭೂಮಿಯಲ್ಲಿ ಮೂರು ಮನೆಗಳು ಹಾಗೂ ಒಂದು ಹೋಟೆಲ್ ತಲೆ ಎತ್ತಿದ್ದವು. ಸಮೀಕ್ಷೆ ನಡೆಸುವ ಮೂಲಕ ಈ ಅಕ್ರಮವನ್ನು ಪತ್ತೆ ಹಚ್ಚಿದ್ದ ಬಿಡಿಎ ಅಧಿಕಾರಿಗಳು, ಜೆಸಿಬಿಗಳ ಸಹಾಯದಿಂದ ಕಟ್ಟಡಗಳನ್ನು ಕೆಡವಲು ನಿರ್ಧರಿಸಿ ಕಾರ್ಯಾಚರಣೆಗೆ ಮುಂದಾಗಿದ್ದರು. ಕೂಡಲೇ ನ್ಯಾಯಾಲಯದ ಮೊರೆಹೋದ ಮನೆ ಹಾಗೂ ಹೋಟೆಲ್ ಮಾಲೀಕರು ದೂರು ದಾಖಲಿಸಿ ನ್ಯಾಯ ಒದಗಿಸುವಂತೆ ಕೋರಿದ್ದರು. ಬಳಿಕ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್, ಇಂದು ವಿಚಾರಣೆಯನ್ನು ಕೈಗೊಂಡಿದ್ದು ಅಂತ್ಯವಾಗುವ ವರೆಗೆ ಕಾರ್ಯಾರಣೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಅಧಿಕಾರಿಗಳು ಯಥಾ ಸ್ಥಿತಿಯನ್ನು ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ