ಲೋಕಾಯುಕ್ತ ಮೆಟ್ಟಿಲೇರಿದ ಸಿಎಂ ದುಬಾರಿ ವಾಚ್ ವಿವಾದ

ಗುರುವಾರ, 11 ಫೆಬ್ರವರಿ 2016 (12:32 IST)
ಭಾರಿ ಕೋಲಾಹಲಕ್ಕೆ ಕಾರಣವಾಗಿರುವ ದುಬಾರಿ ಡೈಮಂಡ್ ವಾಚ್ ವಿವರವನ್ನು ಸಿಎಂ ಸಿದ್ದರಾಮಯ್ಯ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ದಾಖಲೆಯಲ್ಲೂ ನಮೂದಿಸಿಲ್ಲ ಎಂಬ ಅಂಶ ಬೆಳಕಿಗೆ ಬಂದಿದ್ದು, ಈ ವಿವಾದ ಈಗ ಲೋಕಾಯುಕ್ತ ಮೆಟ್ಟಿಲೇರಿದೆ.

ಮುಖ್ಯಮಂತ್ರಿ ಧರಿಸುವ ವಜ್ರಖಚಿತ ಹ್ಯೂಬ್ಲೋಟ್ ಕಂಪನಿ ಕೈಗಡಿಯಾರದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಮಾನವ ಹಕ್ಕು ರಕ್ಷಣೆ, ಭ್ರಷ್ಟಾಚಾರ ನಿರ್ಮೂಲನಾ ಸ೦ಸ್ಥೆ ಕಾರ್ಯಕರ್ತರಾದ ರಾಮಮೂರ್ತಿಗೌಡ ಮಾಧ್ಯಮಗಳ ವರದಿಯನ್ನು ಆಧರಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. 
 
ಅರ್ಕಾವತಿ ಡಿನೋಟಿಫೇಸನ್, ಗಣಿ ಗುತ್ತಿಗೆ ಅಕ್ರಮ ಪರವಾನಗಿ ವಿತರಣೆ ಸೇರಿದಂತೆ ಸಿಎ೦ ವಿರುದ್ಧ ಲೋಕಾಯುಕ್ತರಲ್ಲಿ ಈಗಾಗಲೇ ಮೂರು ದೂರು ದಾಖಲಿಸಿರುವ ರಾಮಮೂರ್ತಿಗೌಡ ಈಗ ಮತ್ತೊಂದು ದೂರನ್ನು ನೀಡಿದ್ದಾರೆ.
 
ನಿಯಮದ ಪ್ರಕಾರ, ಯಾವುದೇ ಮೌಲ್ಯಯುತ ವಸ್ತುವನ್ನು ಸ್ವತಃ ಖರೀದಿಸಿದ್ದರೂ, ಇಲ್ಲವೇ ಉಡುಗೊರೆಯಾಗಿ ಪಡೆದಿದ್ದರೂ ಆಸ್ತಿ ವಿವರದಲ್ಲಿ ನಮೂದಿಸಬೇಕು.
ಆದರೆ ಸಿದ್ದರಾಮಯ್ಯ ಈ ವಾಚ್ ಬಗ್ಗೆ 2015 ಮಾರ್ಚ್ 31 ರಂದು ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರ ಪ್ರಮಾಣಪತ್ರದಲ್ಲಿ ನಮೂದಿಸಿಲ್ಲ. 
 
ಇನ್ನು ವಾಚ್ ವಿವಾದ ಹುಟ್ಟಿಹಾಕಿರುವ ಮಾಜಿ ಮುಖ್ಯಮ೦ತ್ರಿ ಹೆಚ್.ಡಿ. ಕುಮಾರಸ್ವಾಮಿ ಸಿಎಂ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದು  ದುಬಾರಿ ಬೆಲೆಯ ವಾಚನ್ನು ಕೊಟ್ಟವರಾರು ಎ೦ದು ಸಿಎ೦ ಸಿದ್ದರಾಮಯ್ಯ ಬಹಿರ೦ಗಪಡಿಸಬೇಕೆಂದು  ಸವಾಲು ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ