ರಾಜಧಾನಿ ಪ್ರದಕ್ಷಿಣೆಯಲ್ಲಿ ಸಿಎಂ: ಬೌರಿಂಗ್ ಆಸ್ಪತ್ರೆ ಅಧೀಕ್ಷಕರಿಗೆ ತರಾಟೆ

ಶುಕ್ರವಾರ, 15 ಮೇ 2015 (11:32 IST)
ಸಿದ್ದರಾಮಯ್ಯ, ಬಿಬಿಎಂಪಿ ಚುನಾವಣೆ ಹತ್ತಿರ ಸುಳಿಯುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದು ರಾಜಧಾನಿಯಾದ್ಯಂತ ನಗರ ಪ್ರದಕ್ಷಿಣೆ ಹಮ್ಮಿಕೊಂಡಿದ್ದು, ಶಿವಾಜಿನಗರದಲ್ಲಿನ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಅಧೀಕ್ಷಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 
 
ಇಂದು ಬೆಳಗ್ಗೆ 9.40ರ ವೇಳೆಗೆ ಆಸ್ಪತ್ರೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಆಸ್ಪತ್ರೆ ಸಿಬ್ಬಂದಿಯ ಹಾಜರಾತಿ ದಾಖಲಾತಿಯನ್ನು ಪರಿಶೀಲಿಸಿದರು. ಈ ವೇಳೆ ಸಾಕಷ್ಟು ಸಿಬ್ಬಂದಿಗಳು ವೇಳೆಗೆ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂಬುದು ಕಂಡು ಬಂತು. ಅಲ್ಲದೆ ಬಯೋಮೆಟ್ರಿಕ್ ಸಾಧನವನ್ನು ಪರಿಶೀಲಿಸಿದಾಗ ಕಾರ್ಯ ನಿಷ್ಕ್ರಿಯವಾಗಿರುವುದೂ ಕೂಡ ಬೆಳಕಿಗೆ ಬಂತು. ಇದರಿಂದ ಕುಪಿತಗೊಂಡ ಸಿಎಂ ಸಿದ್ದರಾಮಯ್ಯ ಅಧೀಕ್ಷಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ ಹಾಜರಾತಿ ಹಾಕಿರುವ ಎಲ್ಲಾ ಸಿಬ್ಬಂದಿಗಳನ್ನು ಕರೆಸಿ ಎಂದು ಅಧೀಕ್ಷಕರಿಗೆ ಖಡಕ್ಕಾಗಿ ಸೂಚಿಸಿದರು. 
 
ಇದೇ ವೇಳೆ, ಸರ್ಕಾರ ಸರಿಯಾಗಿ ಸಂಬಳವನ್ನು ನೀಡುತ್ತಿದ್ದರೂ ಕೂಡ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ, ಅಧಿಕಾರಿಗಳು ತಮ್ಮ ಸೇವೆಯಲ್ಲಿ ಬೇಜವಾಬ್ದಾರಿಯನ್ನು ತೋರಿದಲ್ಲಿ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು. 
 
ಇದಕ್ಕೂ ಮುನ್ನ ಇತರೆಡೆ ಸಂಚರಿಸಿದ ಸಿದ್ದರಾಮಯ್ಯ, ನಗರದಲ್ಲಿ ಅನುಷ್ಠಾನಕ್ಕೆ ತರಲಾಗಿದ್ದ ಹಲವು ಟೆಂಡರ್ ಕಾಮಗಾರಿಗಳ ಬಗ್ಗೆ ಪರಿಶೀಲಿಸಿದರು. ಈ ವೇಳೆ ಕಾಮಗಾರಿಗಳು ಸೂಕ್ತವಾಗಿ, ಗುಣಮಟ್ಟತೆಯಿಂದ ಕೂಡಿರಲಿ ಎಂದು ಕಂಟ್ರ್ಯಾಕ್ಟರ್‌ಗಳಿಗೆ ಸೂಚಿಸಿದರು.  
 
ಸಿಎಂ ಸಿದ್ದರಾಮಯ್ಯ ಅವರೊಂದಿಗೆ ತಮ್ಮ ಸಂಪುಟ ಸಹದ್ಯೋಗಿಗಳಾದ ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಗೃಹ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಇತರೆ ಉನ್ನತಾಧಿಕಾರಿಗಳ ವರ್ಗ ಸಾಥ್ ನೀಡಿತ್ತು.  

ವೆಬ್ದುನಿಯಾವನ್ನು ಓದಿ