ಬಿಜೆಪಿ ವೈದ್ಯರನ್ನು ನೇಮಿಸಿಲ್ಲ ಎಂದ ಸಿಎಂ: ಆಡಳಿತ-ವಿರೋಧ ಪಕ್ಷಗಳ ನಡುವೆ ವಾಕ್ಸಮರ

ಶುಕ್ರವಾರ, 19 ಡಿಸೆಂಬರ್ 2014 (12:37 IST)
ಇಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ, ಹಿಂದಿನ ಬಿಜೆಪಿ ಸರ್ಕಾರ ಶಿಕ್ಷಕರ ಹಾಗೂ ವೈದ್ಯರ ನೇಮಕ ಮಾಡಿಲ್ಲ ಎಂದಿದ್ದರಿಂದ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರ ಏರ್ಪಟ್ಟ ಸನ್ನಿವೇಶ ಕಂಡುಬಂತು.  
 
ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿಯೂ ಕೂಡ ಅನೇಕ ಹುದ್ದೆಗಳು ಖಾಲಿ ಇದ್ದು, ಇವೆಲ್ಲವನ್ನೂ ಸಹ ಬರುವ ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಅಲ್ಲದೆ ಒಮ್ಮೆ ನೇಮಕಗೊಂಡರೆ ಮೂರು ವರ್ಷಗಳ ಕಾಲ ಅಲ್ಲಿಯೇ ಸೇವೆ ಸಲ್ಲಿಸಬೇಕಾಗುತ್ತದೆ. ಆ ಬಳಿಕವಷ್ಟೇ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು ಎಂದರು. ಬಳಿಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ವೈದ್ಯರ ಹಾಗೂ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಹುದ್ದೆಗಳು ಸಾಕಷ್ಟು ಖಾಲಿ ಇದ್ದು, ಈ ಹಿಂದಿದ್ದ ಬಿಜೆಪಿ ಸರ್ಕಾರ ನೇಮಕಾತಿ ಮಾಡಿಕೊಂಡಿಲ್ಲದ ಕಾರಣ ನಾವೇ ನೇಮಕಾತಿ ಮಾಡಿಕೊಳ್ಳಬೇಕಿದೆ ಎಂದರು. 
 
ಇದರಿಂದ ಕುಪಿತಗೊಂಡ ಮಾಜಿ ಸಚಿವ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ರೀ ಮುಖ್ಯಮಂತ್ರಿ ಸಾಹೇಬ್ರೇ... ಬಾಯಿಗೆ ಬಂದ ಹಾಗೆ ಮಾತನಾಡಬೇಡಿ ಎಂದು ಕೋಪೋದ್ರೇಕಗೊಂಡರು. ಕಾಗೇರಿಗೆ ಬಿಜೆಪಿಯ ಇತರೆ ಸದಸ್ಯರೂ ಕೂಡ ಸಾಥ್ ನೀಡಿದರು. ಇದರಿಂದ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರ ಏರ್ಪಟ್ಟು ಸದನದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಬಳಿಕ ಸಭಾಧ್ಯಕ್ಷರ ಮಧ್ಯ ಪ್ರವೇಶದಿಂದ ವಾಕ್ಸಮರ ಅಂತ್ಯಗೊಂಡಿತು. ಶಾಸಕ ಕಾಗೇರಿ, ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಅಧಿಕಾರ ನಿರ್ವಹಿಸಿದ್ದರು.

ವೆಬ್ದುನಿಯಾವನ್ನು ಓದಿ