ಸಹೋದ್ಯೋಗಿಗಳಿಗೆ ಬಂಪರ್ ಕೊಡುಗೆ ನೀಡಿದ ಸಿಎಂ ಸಿದ್ದರಾಮಯ್ಯ

ಸೋಮವಾರ, 30 ಮಾರ್ಚ್ 2015 (16:59 IST)
ಸರ್ಕಾರವು ವಿಧಾನಮಂಡಲಗಳಗಳ ನಿವೃತ್ತಿ, ಭತ್ಯೆಗಳ ವಿಧೇಯಕ-2015ನ್ನು ಮಂಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಿಎಂ ಸೇರಿದಂತೆ ಸಚಿವ ಮತ್ತು ಶಾಸಕರ ವೇತನ ಹೆಚ್ಚಳವಾಗಲಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯನವರು ತಮ್ಮ ಸಹೋದ್ಯೋಗಿಗಳಿಗೆ ಬಂಪರ್ ಕೊಡುಗೆ ನೀಡಿದ್ದಾರೆ. 
 
ಈ ಹಿಂದಿನ ನಿಯಮಗಳ ಪ್ರಕಾರ ಶಾಸಕರ ಮೂಲ ವೇತನ 20 ಸಾವಿರ ಮಾತ್ರ ಆಗಿತ್ತು. ಆದರೆ ಪ್ರಸ್ತುತ 25000ಕ್ಕೆ ಏರಿಕೆಯಾಗಿದೆ. ಇನ್ನು ಕ್ಷೇತ್ರದ ಸಂಚಾರ ಭತ್ಯೆಯನ್ನು 15 ಸಾವಿರದಿಂದ 40 ಸಾವಿರ, ದೂರವಾಣಿ ಕರೆಗಳ ವೆಚ್ಚ 15 ಸಾವಿರದಿಂದ 20 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಹೀಗೆ ಒಟ್ಟು ಪ್ರಸ್ತುತ 1,25,000 ಸಾವಿರ ಪಡೆಯಲಿದ್ದಾರೆ. ಇದರ ಜೊತೆಗೆ ಶಾಸಕರು ಪಾಲ್ಗೊಳ್ಳುವ ಪ್ರತಿ ಸಭೆಗೆ ದಿನವೊಂದಕ್ಕೆ 1500 ರೂ. ಹಾಗೂ ಪ್ರತಿ ಕಿ.ಮೀ 25 ರೂ ನಂತೆ ಪ್ರಯಾಣ ಭತ್ಯೆಯನ್ನೂ ನೀಡಲಾಗುತ್ತದೆ.ಈ ಹಿಂದೆ ಶಾಸಕರ ಒಟ್ಟು ವೇತನ 75 ಸಾವಿರವಿತ್ತು.   
 
ಇನ್ನು ಸಿಎಂ ವೇತನವು 30 ಸಾವಿರದಿಂದ 50 ಸಾವಿರಕ್ಕೆ ಏರಿಕೆಯಾಗಿದ್ದು, ಮನೆ ಬಾಡಿಗೆ 35 ಸಾವಿರದಿಂದ 45 ಸಾವಿರ, ಮನೆ ನಿರ್ವಹಣೆ 15 25 ಸಾವಿರ, ಅತಿಥ್ಯ ಭತ್ಯೆ 1 ಲಕ್ಷದಿಂದ 3 ಲಕ್ಷಕ್ಕೆ ಏರಿಕೆಯಾಗಿದೆ.  
 
ಈ ಹಿಂದೆ ಕ್ಯಾಬಿನೆಟ್ ಸಚಿವರ ಮೂಲ ವೇತನ 25 ಸಾವಿರವಿತ್ತು. ಅದು ಪ್ರಸ್ತುತ 40 ಸಾವಿರವಾಗಿದ್ದು, ಮನೆ ಬಾಡಿಗೆ 25 ಸಾವಿರದಿಂದ 40 ಸಾವಿರ, ಮನೆ ನಿರ್ವಹಣೆ 10 ಸಾವಿರದಿಂದ 20,000 ಹಾಗೂ ಅತಿಥ್ಯ ಭತ್ಯೆ 1 ಲಕ್ಷದಿಂದ 3 ಲಕ್ಷಕ್ಕೆ ಏರಿಕೆಯಾಗಿದೆ. ಇದಲ್ಲದೆ ತಿಂಗಳಿಗೆ 1000 ಲೀಟರ್ ಪೆಟ್ರೋಲ್‌ನ್ನು ಉಚಿತವಾಗಿ ಬಳಸಬಹುದಾಗಿದೆ. 
 
ಇನ್ನು ರಾಜ್ಯ ಸಚಿವರ ವೇತನವೂ ಹೆಚ್ಚಿದ್ದು, ಮೂಲ ವೇತನ 15 ಸಾವಿರದಿಂದ 35000ಕ್ಕೆ, ಮನೆ ಬಾಡಿಗೆಯು 40 ಸಾವಿರದಿಂದ 80 ಸಾವಿರಕ್ಕೆ ಏರಿಕೆಯಾಗಿದೆ. ಇವರೂ ಕೂಡ ತಿಂಗಳಿಗೆ ಸಾವಿರ ಲೀಟರ್ ಪೆಟ್ರೋಲ್‌ನ್ನು ಉಚಿತವಾಗಿ ಬಳಸಬಹುದಾಗಿದೆ. 
 

ವೆಬ್ದುನಿಯಾವನ್ನು ಓದಿ