ಸಿಎಂ ಸಿದ್ದರಾಮಯ್ಯ ಸುಳ್ಳಿನ ಸರದಾರರು: ಈಶ್ವರಪ್ಪ

ಗುರುವಾರ, 23 ಏಪ್ರಿಲ್ 2015 (18:26 IST)
ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿರುವ ಸರ್ಕಾರ ಸುಳ್ಳಿನ ಸರ್ಕಾರ, ಸಿಎಂ ಸಿದ್ದರಾಮಯ್ಯ ಅವರು ಸುಳ್ಳಿನ ಸರದಾರರು ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಅವರನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಛೇಡಿಸಿದ್ದಾರೆ. 
 
ಇಂದು ವಿಧಾನಸೌಧದಲ್ಲಿ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದ ಈಶ್ವರಪ್ಪ, ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಸುಳ್ಳಿಗೆ ಸುಳ್ಳು ಸೇರಿಸುವ ಪಕ್ಷವನ್ನು ಜರಿಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸುಳ್ಳಿನ ಸರದಾರರು. ಹಾಗಾಗಿಯೇ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿರುವ ಸರ್ಕಾರ ಸುಳ್ಳಿನ ಸರ್ಕಾರವಾಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 
 
ಆಕ್ರೋಶಕ್ಕೆ ಕಾಣವೇನು?
ಕಲಾಪದಲ್ಲಿ ಬಿಬಿಎಂಪಿ ವಿಭಜನೆಗೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು, ವಿರೋಧ ಪಕ್ಷಗಳು ಬಿಬಿಎಂಪಿಯನ್ನು ವಿಭಜಿಸಬಾರದು ಎಂದು ವಿನಾಃ ಕಾರಣ ಅಡ್ಡಿಪಡಿಸುತ್ತಿವೆ. ಇದು ಸರಿಯಲ್ಲ. ಬ್ರಿಟನ್ ನಲ್ಲಿಯೂ ಕೂಡ ಇಂತಹ ನಿರ್ಧಾರವನ್ನು ಕೈಗೊಂಡು 32 ಆಡಳಿತ ಪರ್ವಗಳನ್ನು ರಚಿಸಲಾಗಿದೆ. ಆದರೆ ಇಂತಹ ಕಾರ್ಯಕ್ಕೆ ರಾಜ್ಯದಲ್ಲಿ ಅವಕಾಶ ನೀಡುತ್ತಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದ ಅವರು, ಈ ಹಿಂದಿದ್ದ ಬಿಜೆಪಿ ಸರ್ಕಾರದ ನಿಲುವೂ ಕೂಡ ಬಿಬಿಎಂಪಿ ವಿಭಜನೆ ಮಾಡಬೇಕು ಎಂಬುದೇ ಆಗಿತ್ತು ಎಂದರು. 
 
ಇದೇ ವೇಳೆ ಹಾಳೆಯೊಂದನ್ನು ಕೈಯಲ್ಲಿಡಿದ ಸಿಎಂ, ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಎನ್. ಸುರೇಶ್ ಕುಮಾರ್ ಅವರೂ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿ ಸರ್ಕಾರವೇ ದಾಖಲಿಸಿದ್ದ ಹೇಳಿಕೆಯನ್ನು ಸದನದ ಮುಂದಿಟ್ಟರು. ಇದರಿಂದ ಕುಪಿತಗೊಂಡ ಈಶ್ವರಪ್ಪ ಈ ರೀತಿಯಾಗಿ ಆಕ್ರೋಶ ಹೊರ ಹಾಕಿದರು. 
 
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಬಿಎಂಪಿ ವಿಭಜನೆ ವಿಚಾರದಲ್ಲಿ ವಿವಾದ ಸೃಷ್ಟಿಸುವುದು ಬೇಡ ಎಂದು ಪ್ರತಿಪಕ್ಷಗಳ ಸದಸ್ಯರಲ್ಲಿ ಮನವಿ ಮಾಡಿದರು. 
 
ಅಲ್ಲದೆ ಒಂದು ಸುಳ್ಳನ್ನು ನೂರು ಬಾರಿ ಹೇಳುವ ಖಯಾಲಿ ಇರುವುದು ಭಾರತೀಯ ಜನತಾ ಪಾರ್ಟಿಗೆ ಮಾತ್ರ ಎಂದು ತಿರುಗೇಟು ನೀಡಿದರು. 
 
ಈಶ್ವರಪ್ಪ ಅವರ ಹೇಳಿಕೆ ಪ್ರತ್ಯುತ್ತರ ನೀಡಿದ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ವಿ.ಎಸ್.ಉಗ್ರಪ್ಪ, ಸುಳ್ಳಿನ ವಿಚಾರದಲ್ಲಿ ಪ್ರಧಾನಿ ಮೋದಿ ಮುಂದಿದ್ದು, ಅವರಿಗೆ ನೊಬೆಲ್ ಪ್ರಶಸ್ತಿ ಕೊಡಬಹುದು ಎಂದರು. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಈಶ್ವರಪ್ಪ ಸುಳ್ಳುಗಾರರಿಗೆ ನೀಡುವ ಪ್ರಶಸ್ತಿಯನ್ನು ನಿಮಗೇ ಕೊಡುವುದು ಎಂದು ಉಗ್ರಪ್ಪ ಅವರಿಗೆ ಟಾಂಗ್ ನೀಡಿದರು. 

ವೆಬ್ದುನಿಯಾವನ್ನು ಓದಿ