ಆಡು ಮುಟ್ಟದ ಸೊಪ್ಪಿಲ್ಲ, ಡಾ. ರಾಜ್ ನಟಿಸದ ಪಾತ್ರಗಳಿಲ್ಲ : ಸಿಎಂರಿಂದ ಗುಣಗಾನ

ಶನಿವಾರ, 29 ನವೆಂಬರ್ 2014 (12:33 IST)
ಡಾ.ರಾಜ್  ಸ್ಮಾರಕ ಲೋಕಾರ್ಪಣೆ ಸಮಾರಂಭದಲ್ಲಿ  ಸಿಎಂ ಸಿದ್ದರಾಮಯ್ಯ ಅವರು  ಮಾತನಾಡುತ್ತಾ, ಡಾ. ರಾಜ್ ಸ್ಮಾರಕ ಲೋಕಾರ್ಪಣೆ ಮಾಡಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು. ಡಾ. ರಾಜ್  ಅಗಲಿ ಇಂದಿಗೆ 8 ವರ್ಷಗಳು ಗತಿಸಿದವು.

ಡಾ. ರಾಜ್  ಅವರ ನಿಧನದಿಂದ ಸಾಂಸ್ಕೃತಿಕ ಲೋಕ ಬಡವಾಗಿದೆ. ಅವರು ಸಾಮಾಜಿಕ ಪೌರಾಣಿಕ ಜೊತೆಗೆ ಬಾಂಡ್ ಚಿತ್ರಗಳಿರಲಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಅವರು ಅಭಿನಯಿಸದೇ ಇರುವ ಪಾತ್ರಗಳೇ ಇರಲಿಲ್ಲ. ಅವರು ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುತ್ತಿದ್ದರು.

ಆ ಪಾತ್ರದಲ್ಲೇ ತಲ್ಲೀನರಾಗಿ ಪ್ರತಿಯೊಂದು ಪಾತ್ರವೂ ಜೀವಂತವಾಗಿರುವಂತೆ ನೋಡುತ್ತಿದ್ದರು. ಬಹುಶಃ ರಾಜ್‌ಕುಮಾರ್ ಅವರಂಥ ಇನ್ನೊಬ್ಬ ನಟನನ್ನು ಕನ್ನಡದಲ್ಲಿ ಕಾಣುವುದು ಕಷ್ಟವೆಂದು ಅನಿಸುತ್ತದೆ. ರಾಜ್ ಕುಮಾರ್  ಅವರಿಗೆ  ರಾಜ್‌ಕುಮಾರ್ ಅವರೇ ಸಾಟಿಯಾಗಿದ್ದಾರೆ. ಅವರು ಬದುಕಿರುವವರೆಗೆ ಸಾಂಸ್ಕೃತಿಕ ರಾಯಭಾರಿಯಾಗಿದ್ದರು.

 ಡಾ. ರಾಜ್ ಬಗ್ಗೆ ನನಗೆ ಹೆಮ್ಮೆ , ಗೌರವ. ಒಂದು ಅವರೊಬ್ಬರು ಮೇರುನಟ ಎನ್ನುವುದರ ಜೊತೆ ನಮ್ಮ ಜಿಲ್ಲೆಯವರು. ಅವರ ವಿನಯವಂತಿಕೆ, ವಿನಮ್ರತೆ ಎಲ್ಲವೂ ಸೂಜಿಗಲ್ಲಿನಂತೆ ಆಕರ್ಷಿಸಿತು. ಹೀಗಾಗಿ ಎಲ್ಲಾ ಜನರ ಮನಸ್ಸನ್ನು ಸೂರೆಗೊಂಡರು. ಅವರು ಬೌತಿಕವಾಗಿ ನಮ್ಮನ್ನು ಬಿಟ್ಟು ಹೋಗಿದ್ದರೂ ಕೂಡ ಅವರು ಎಲ್ಲ ಕಾಲಕ್ಕೂ ಎಲ್ಲಾ ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿ ಉಳಿದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. 

ವೆಬ್ದುನಿಯಾವನ್ನು ಓದಿ