ಜಂಬೂ ಸವಾರಿ ಹಿಂದೂಡಿಕೆ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

ಶನಿವಾರ, 3 ಅಕ್ಟೋಬರ್ 2015 (12:37 IST)
ವಿಜಯದಶಮಿ ಮೆರವಣಿಗೆಯನ್ನು ಒಂದು ದಿನ ಹಿಂದೂಡಿರುವುದನ್ನು ಸಿಎಂ ಸಿದ್ದರಾಮಯ್ಯ ಅವರು ಇಂದು ಸಮರ್ಥಿಸಿಕೊಂಡಿದ್ದು, ಮೂಢ ನಂಬಿಕೆಗಳನ್ನು ನಾವು ಪಾಲಿಸುತ್ತಿಲ್ಲ. ಅಲ್ಲದೆ ನಾವು ಅರಮನೆಯಲ್ಲಿ ಜರುಗುವ ಯಾವುದೇ ಕಾರ್ಯಕ್ರಮಗಳಿಗೂ ಕೂಡ ಅಡ್ಡಿಪಡಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
 
ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸರ್ಕಾರದ ತೀರ್ಮಾನ ಸರಿಯಾಗಿದೆ. ನಾವು ಮೆರವಣಿಗೆಯನ್ನು ಹಿಂದೂಡಿರುವುದರಿಂದ ಅರಮನೆಯ ಯಾವ ಕಾರ್ಯಕ್ರಮಗಳಿಗೂ ಕೂಡ ಅಡಚಣೆಯಾಗುವುದಿಲ್ಲ. ಹಿಂದಿನ ಸಂಪ್ರದಾಯದಂತೆ ನಡೆಯುವ ಕಾರ್ಯಕ್ರಮಗಳಿಗೆ ನಾವೇಕೆ ಅಡ್ಡಿ ಪಡಿಸೋಣ ಎಂದ ಅವರು, ಸರ್ಕಾರ ಮೂಢ ನಂಬಿಕೆಗೆ ಜೋತು ಬಿದ್ದಿಲ್ಲ ಎಂದರು. 
 
ಇನ್ನು ಈ ಸಂಬಂಧ ಪ್ರತಿಕ್ರಿಯಿಸಿದ್ದ ಇತಿಹಾಸಕಾರ ಪ್ರೊ.ಪಿ.ವಿ.ನಂಜರಾಜ ಅರಸ್, ಅ.23ಕ್ಕೆ ನಡೆಸಬೇಕಿದ್ದ ಜಂಬೂ ಸವಾರಿ ಮೆರವಣಿಗೆಯನ್ನು ಆಯುಧ ಪೂಜೆ ದಿನದಂದೇ ವಿಜಯದಶಮಿಯನ್ನೂ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಜ್ಯೋತಿಷಿಗಳ ಮಾತು ಕೇಳಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಆರೋಪಿಸಿದ್ದರು. ಅಲ್ಲದೆ ಸರ್ಕಾರದ ಈ ನಿರ್ಧಾರದಿಂದ ಅರಮನೆ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತದೆ. ಜೊತೆಗೆ ಸಾರ್ವಜನಿಕರಿಗೂ ಕೂಡ ತೊಂದರೆಯಾಗುತ್ತದೆ. ಹಾಗಾಗಿ ಸರ್ಕಾರ ಈ ಹಿಂದೆ ನಿಗದಿಗೊಳಿಸಿದ್ದ ದಿನಾಂಕದಂದೇ ಮೆರವಣಿಗೆ ನಡೆಸಬೇಕು ಎಂಬ ಅಭಿಪ್ರಾಯವನ್ನು ಹೊರ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 
 
ಈ ಹಿಂದೆ ಸರ್ಕಾರದ ಕ್ಯಾಲೆಂಡರ್‌ಗಳಲ್ಲಿ ಈ ಬಾರಿಯ ದಸರಾದ ಜಂಬೂ ಸವಾರಿ ಮೆರವಣಿಗೆಯನ್ನು ಅ.23ರಂದು ನಡೆಸಲಾಗುವುದು ಎಂದು ಸರ್ಕಾರ ಪ್ರಕಟಿಸಿತ್ತು. ಆದರೆ ಪ್ರಸ್ತುತ ಸರ್ಕಾರವು ಈ ನಿರ್ಧಾರವನ್ನು ಬದಲಿಸಿದ್ದು, ಅ.22ರಂದು ಅಂದರೆ ಆಯುಧ ಪೂಜೆಯಂದೇ ಮೆರವಣಿಗೆ ನಡೆಸಲು ನಿರ್ಧರಿಸಿದೆ. ಇದು ಪ್ರಸ್ತುತ ವಿವಾದಕ್ಕೆ ಕಾರಣವಾಗಿದೆ. 
 

ವೆಬ್ದುನಿಯಾವನ್ನು ಓದಿ