ಕೊನೆಗೂ ಯೋಧನ ಆರೋಗ್ಯ ವಿಚಾರಿಸಲು ದೆಹಲಿಗೆ ಹೊರಟರು ಸಿಎಂ

ಗುರುವಾರ, 11 ಫೆಬ್ರವರಿ 2016 (11:51 IST)
ಸಿಯಾಚಿನ್ ಹಿಮಪಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದು ಈಗ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಯೋಧ ಹನುಮಂತಪ್ಪ ಕೊಪ್ಪದ ಅವರ ಆರೋಗ್ಯ ವಿಚಾರಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ.

 
ಇಂದು ಸಾಯಂಕಾಲ 5ಗಂಟೆಗೆ ದೆಹಲಿಗೆ ಪ್ರಯಾಣ ಬೆಳಸಿರುವ ಸಿಎಂ ಸಿದ್ದರಾಮಯ್ಯ ದೆಹಲಿಯ ಆರ್‌ಆರ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.
 
ಯೋಧನ ಆರೋಗ್ಯ ವಿಚಾರಿಸಿ, ಈ ಬಗ್ಗೆ ವೈದ್ಯರಿಂದ ಸ್ಪಷ್ಟ ಮಾಹಿತಿ ಪಡೆಯಲಿರುವ ಸಿಎಂ ಕುಟುಂಬಸ್ಥರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.
 
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಸೈನಿಕ ಇನ್ನು ಸಹ ಕೋಮಾ ಸ್ಥಿತಿಯಲ್ಲಿದ್ದು ಅವರನ್ನು ವಿಶೇಷ ವೈದ್ಯರ ತಂಡ ಅವರ ಮುತುವರ್ಜಿ ವಹಿಸಿದೆ. ಏಮ್ಸ್ ನ ನುರಿತ ವೈದ್ಯರು ಕೂಡ ಯೋಧನ ಚಿಕಿತ್ಸೆಯಲ್ಲಿ ನೆರವು ನೀಡುತ್ತಿದ್ದಾರೆ.
 
ಮಂಗಳವಾರ ಸಿಎಂ ಹುಬ್ಬಳ್ಳಿಗೆ ಭೇಟಿ ನೀಡಿದ್ದರೂ ಯೋಧನ ಕುಟುಂಬಸ್ಥರನ್ನು ಭೇಟಿ ಮಾಡಿರಲಿಲ್ಲ. ಅಂದು ಹನುಮಂತಪ್ಪ ಪರಿವಾರದವರು ದೆಹಲಿಗೆ ತೆರಳಿದ್ದರಿಂದ ತಾವು ಅವರನ್ನು ಭೇಟಿಯಾಗಲಾಗಲಿಲ್ಲ ಎಂದು ಸಿಎಂ ತಾವು ಭೇಟಿಯಾಗದಿರುವುದಕ್ಕೆ ಸ್ಪಷ್ಟನೆ ನೀಡಿದ್ದರು.
 
ನಿನ್ನೆ ರಾಜ್ಯಪಾಲ ವಾಜುಭಾಯಿ ವಾಲಾ  ಅವರು ಆರ್‌ಆರ್ ಆಸ್ಪತ್ರೆಗೆ ಭೇಟಿ ನೀಡಿ ಯೋಧ ಹನುಮಂತನ ಆರೋಗ್ಯ ವಿಚಾರಿಸಿದ್ದರು. ಧೀರ ಯೋಧ ಆದಷ್ಟು ಬೇಗ ಗುಣಮುಖರಾಗಲಿ ಎಂದು ಈಶ್ವರನಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದರು. 

ವೆಬ್ದುನಿಯಾವನ್ನು ಓದಿ