ಸಿಎಂ ಬಯಸಿದ್ರೆ ಒಂದೇ ನಿಮಿಷದಲ್ಲಿ ರಾಜೀನಾಮೆ: ಜಾರ್ಜ್

ಮಂಗಳವಾರ, 12 ಜುಲೈ 2016 (16:04 IST)
ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ರಾಜೀನಾಮೆ ಬಯಸಿದರೆ ಒಂದೇ ನಿಮಿಷದಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
 
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್, ನನ್ನಿಂದಾಗಿ ಪಕ್ಷ ಹಾಗೂ ಸರಕಾರಕ್ಕೆ ಧಕ್ಕೆಯಾಗುವುದು ಬೇಡ. ಆದರೆ, ನಾನು ತಪ್ಪು ಮಾಡಿಲ್ಲ. ಅಧಿಕಾರಕ್ಕೆ ಅಂಟಿಕೊಂಡು ಕೂರುವ ವ್ಯಕ್ತಿ ನಾನಲ್ಲ. ಮಾಡದ ತಪ್ಪಿಗೆ ನಾನೇಕೆ ಶಿಕ್ಷೆ ಅನುಭವಿಸಬೇಕು. ರಾಜಕೀಯ ಉದ್ದೇಶದಿಂದ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಹೇಳಿದರು.
 
ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸುಪ್ರಿಂ ಕೋರ್ಟ್ ತೀರ್ಮಾನದಂತೆ ತನಿಖೆ ಮಾಡಲಿ. ಗಣಪತಿ ಅವರಿಗೆ ನಾನು ಕಿರುಕುಳ ನೀಡಿದ್ದೇನೆ ಎನ್ನುವ ಕನಿಷ್ಠ ಸಾಕ್ಷಿಯಾದರು ಬೇಕಲ್ಲವೆ? ಎಂದು ಪ್ರಶ್ನಿಸಿದರು.
 
ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ಪಕ್ಷ ನನಗೆ ನೀಡಿರುವ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸಿದ್ದೇನೆ. ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ವಿಪಕ್ಷಗಳು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿವೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಿದ್ದೇನೆ. ಆದರೆ, ಚರ್ಚೆಯ ಕುರಿತು ಹೇಳಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
2008 ರ ಚರ್ಚ್ ದಾಳಿ ಸಂಬಂಧವಾಗಿ ಯಾರ ಮೇಲೂ ಒತ್ತಡ ಹೇರಿಲ್ಲ. ಕ್ರಿಶ್ಚನ್ ಧಾರ್ಮಿಕ ಮುಖಂಡರು ನನ್ನ ಮೇಲೆ ಒತ್ತಡ ಹೇರಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ.  ನಾನು ಗೃಹ ಸಚಿವನಾದ ಮೇಲೆ ಗಣಪತಿ ಅವರಿಗೆ ಎಕ್ಸಿಕ್ಯೂಟಿವ್ ಹುದ್ದೆಗೆ ಬಡ್ತಿ ನೀಡಿದ್ದೇನೆ ಎಂದು ಹೇಳಿದರು.
 
ಪ್ರಕರಣ ಕುರಿತಂತೆ ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ದೇವರು ಅವರಿಗೆ ದುಖಃ ಬರಿಸುವ ಶಕ್ತಿ ನೀಡಲಿ ಎಂದು ಕೇಳಿಕೊಳ್ಳುವುದಾಗಿ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ