ಕಲ್ಲಿದ್ದಲು ಹಂಚಿಕೆ ಹಗರಣ: ಸಿಂಗ್ ವಿರುದ್ಧದ ಸಮನ್ಸ್‌ಗೆ ಸುಪ್ರೀಂನಿಂದ ತಡೆ

ಬುಧವಾರ, 1 ಏಪ್ರಿಲ್ 2015 (12:56 IST)
ಬಹುಕೋಟಿ ಹಗರಣ ಎಂದೇ ಬಿಂಬಿತವಾಗಿರುವ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯವು ಜಾರಿಗೊಳಿಸಿದ್ದ ಸಮನ್ಸ್‌ಗೆ ಸರ್ವೋಚ್ಛ ನ್ಯಾಯಾಲಯ ಇಂದು ತಡೆಯಾಜ್ಞೆ ಹೊರಡಿಸಿದೆ.  
 
ತಮ್ಮ ವಿರುದ್ಧ ಜಾರಿಯಾಗಿರುವ ಸಮನ್ಸ್‌ನ್ನು ರದ್ದುಗೊಳಿಸುವಂತೆ ಕೋರಿ ಮನಮೋಹನ್ ಸಿಂಗ್ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ಸಿಂಗ್ ಸೇರಿದಂತೆ ಇತರೆ ಐವರಿಗೆ ನೀಡಿದ್ದ ಸಮನ್ಸ್‌ಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದು, ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು ಕುಮಾರ ಮಂಗಳಂ, ಪಿ.ಸಿ.ಪಾರಕ್ ಸೇರಿದಂತೆ ಇತರೆ ಆರು ಮಂದಿ ಉದ್ಯಮಿಗಳಿಗೆ ಹಾಗೂ ಹಿಂಡಾಲ್ಕೋ ಸಂಸ್ಥೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ 8 ಕಂಪನಿಗಳಿಗೆ ಮಾ.11ರಂದು ಸಮನ್ಸ್ ಜಾರಿಗೊಳಿಸಿತ್ತು. ಇದಕ್ಕೂ ಮುನ್ನವೇ ಸಿಂಗ್ ಅವರನ್ನು ಹಲವು ಬಾರಿ ವಿಚಾರಣೆಗೂ ಒಳಪಡಿಸಿತ್ತು. 
 
ತಮ್ಮ ಮೇಲ್ಮನವಿ ಅರ್ಜಿಯಲ್ಲಿ ಸಿಂಗ್ ಸಿಬಿಐ ಸಮನ್ಸ್ ಬಗ್ಗೆ ಏನು ಹೇಳಿದ್ದರು ? 
 
ತಮಗೆ ಸಿಬಿಐ ಜಾರಿಗೊಳಿಸಿರುವ ಸಮನ್ಸ್ ಕಾನೂನು ಬದ್ಧವಾಗಿಲ್ಲ ಎಂದು ಆರೋಪಿಸಿರುವ ಅವರು,  ಸಮನ್ಸ್ ಜಾರಿ ವೇಳೆ ಸಿಬಿಐ ಸಿಬ್ಬಂದಿಗಳು ಕಾನೂನಾತ್ಮಕ ನಿಯಮಗಳನ್ನು ಪಾಲಿಸಿಲ್ಲ. ಈ ಹಗರಣದಲ್ಲಿ ನಾನು ಭಾಗಿಯಾಗಿದ್ದೇನೆ ಎಂಬುದಕ್ಕೆ ಪುಷ್ಠಿ ನೀಡುವಂತಹ ಯಾವುದೇ ದಾಖಲೆಗಳು ಅಧಿಕಾರಿಗಳ ಬಳಿ ಇಲ್ಲ. ಹೀಗಾಗಿ ಅಪರಾಧ ವಿಭಾಗದಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಮನ್ಸ್ ಜಾರಿ ಮಾಡಲಾಗಿದೆ. ಸಿಬಿಐ ಅಧಿಕಾರಿಗಳ ಈ ಕ್ರಮ ಸೂಕ್ತವಲ್ಲ. ಆದ್ದರಿಂದ ಸಿಬಿಐ ಜಾರಿಗೊಳಿಸಿರುವ ಸಮನ್ಸ್ ರದ್ದುಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. 

ವೆಬ್ದುನಿಯಾವನ್ನು ಓದಿ