ಪಿಯುಸಿ ಫಲಿತಾಂಶದಲ್ಲಿ ಗೊಂದಲ: ಕೈ ಕೊಯ್ದುಕೊಂಡ ಪೋಷಕಿ

ಶುಕ್ರವಾರ, 22 ಮೇ 2015 (15:53 IST)
ಪಿಯುಸಿ ಫಲಿತಾಂಶದಲ್ಲಿ ಗೊಂದಲ ಉಂಟಾಗಿದ್ದು, ಮಂಡಳಿಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಬೇಸರಗೊಂಡ ವಿದ್ಯಾರ್ಥಿಯ ಪೋಷಕಿಯೋರ್ವರು ಬಳಿಯಿಂದ ತಮ್ಮದೇ ಕೈ ಕೊಯ್ದುಕೊಂಡು ಗಾಯ ಮಾಡಿಕೊಂಡ ಘಟನೆ ಇಂದು ನಡೆದಿದೆ. 
 
ನಗರದ ಮಲ್ಲೇಶ್ವರಂನ ಪರೀಕ್ಷಾ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಬಳೆಯಿಂದ ಕೊಯ್ದುಕೊಂಡು ಗಾಯ ಮಾಡಿಕೊಂಡ ವಿದ್ಯಾರ್ಥಿಯ ಪೋಷಕಿಯನ್ನು ವೀಣಾ(42) ಎಂದು ಹೇಳಲಾಗಿದೆ. ಈ ಘಟನೆಯನ್ನು ಕಂಡ ಇತರೆ ಪ್ರತಿಭಟನಾಕಾರರು ಗಾಯಾಳು ಪೋಷಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. 
 
ಇನ್ನು ಇದೇ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನೇತ್ರಾ(18) ಎಂಬ ವಿದ್ಯಾರ್ಥಿನಿ ಬಿಸಿಲಿನ ತಾಪಕ್ಕೆ ತುತ್ತಾಗಿ ತೀವ್ರವಾಗಿ ಅಸ್ವಸ್ಥರಾದರು. ಬಳಿಕ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂಘಟನೆಯೊಂದರ ಕಾರ್ಯಕರ್ತರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರು. 
 
ಅಂಕ ನೀಡವಲ್ಲಿ ಪರೀಕ್ಷಾ ಮಂಡಳಿ ದ್ವಂದ್ವ ನೀತಿ ಅನುಸರಿಸಿದ್ದು, ನಮಗೆ ಅನ್ಯಾಯವಾಗಿದೆ. ಒಂದೊಂದು ವೆಬ್‌ಸೈಟ್‌ನಲ್ಲಿ ಒಂದೊಂದು ತೆರನಾದ ಫಲಿತಾಂಶ ಪ್ರದರ್ಶಿತವಾಗುತ್ತಿದೆ ಎಂದು ಆರೋಪಿಸಿ ಮಂಡಳಿಯ ವಿರುದ್ಧ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆಯಲ್ಲಿ ತೊಡಗಿದ್ದರು. ಈ ಪ್ರತಿಭಟನೆಯು ಇಂದೂ ಮುಂದುವರಿದಿತ್ತು. ಈ ವೇಳೆ ಈ ಸನ್ನಿವೇಶಗಳು ಕಂಡು ಬಂದವು. 

ವೆಬ್ದುನಿಯಾವನ್ನು ಓದಿ