ಬಿಬಿಎಂಪಿ: ಕಾಂಗ್ರೆಸ್, ಜೆಡಿಎಸ್ ಮೈತ್ರಿ ನಾಳೆ ಅಂತಿಮ ನಿರ್ಧಾರ

ಶುಕ್ರವಾರ, 28 ಆಗಸ್ಟ್ 2015 (15:01 IST)
ಬಿಬಿಎಂಪಿಯಲ್ಲಿ ಕೋಮುವಾದಿ ಪಕ್ಷವನ್ನು ದೂರವಿಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರ ನಡುವೆ ಮಾತುಕತೆಗಳು ನಡೆಯುತ್ತಿದ್ದು ನಾಳೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.
 
ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ಒಂದಾದಲ್ಲಿ ಬಿಬಿಎಂಪಿಯಲ್ಲಿ ನಿಚ್ಚಳ ಬಹುಮತ ದೊರೆಯಲಿದೆ. ಆದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪಕ್ಷೇತರರಿಗೆ ಗಾಳ ಹಾಕಲು ತಂತ್ರ ರೂಪಿಸಿವೆ ಎನ್ನಲಾಗಿದೆ.
 
ಬಿಬಿಎಂಪಿ ಪಾಲಿಕೆಯಲ್ಲಿ ಕೋಮುವಾದಿ ಪಕ್ಷವನ್ನು ಅದಿಕಾರದಿಂದ ದೂರವಿಡಬೇಕು ಎನ್ನುವ ಏಕೈಕ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲಾಗುತ್ತಿದೆ ಎಂದು ಪಕ್ಷದ ನಾಯಕರು ತಮ್ಮ ಸಮರ್ಥನೆ ನೀಡಿದ್ದಾರೆ.
 
ಬಿಬಿಎಂಪಿಯ ಆರು ಪಕ್ಷೇತರ ಸದಸ್ಯರನ್ನು ರಹಸ್ಯ ಸ್ಥಳಕ್ಕೆ ರವಾನಿಸಲಾಗಿದ್ದು, ಅವರನ್ನು ರಾಜ್ಯದಿಂದಲೇ ಹೊರಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಬಿಜೆಪಿ ಪಕ್ಷ ಕಳೆದ ಐದು ವರ್ಷಗಳಲ್ಲಿ ಗಾರ್ಡನ್‌ ಸಿಟಿಯನ್ನು ಗಾರ್ಬೇಜ್ ಸಿಟಿಯನ್ನಾಗಿ ಪರಿವರ್ತಿಸಿತ್ತು. ಆದ್ದರಿಂದ ಬೆಂಗಳೂರು ನಗರ ಅಭಿವೃದ್ಧಿಯಾಗಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ