ಒಂದು ವರ್ಷ ಪೂರೈಸಿದ ಕಾಂಗ್ರೆಸ್ ಸರ್ಕಾರ: ಸಾಧನೆಗಳನ್ನು ಬಿಚ್ಚಿಟ್ಟ ಸಿಎಂ

ಸೋಮವಾರ, 19 ಮೇ 2014 (12:39 IST)
ಕಾಂಗ್ರೆಸ್ ರಾಜ್ಯದಲ್ಲಿ  ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ  ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದು,  ಒಂದು ವರ್ಷದಲ್ಲಿ ಕಾಂಗ್ರೆಸ್ ಕಾರ್ಯಚಟುವಟಿಗಳು ಮತ್ತು ಸಾಧನೆಗಳನ್ನು ಬಿಚ್ಚಿಟ್ಟಿದ್ದಾರೆ.  ಮೇ 13ಕ್ಕೆ ನಮ್ಮ ಸರ್ಕಾರ ಒಂದು ವರ್ಷ ಪೂರೈಸಿದ್ದು, ನಮ್ಮ ಸಾಧನೆಗಳನ್ನು , ಕಾರ್ಯಕ್ರಮಗಳನ್ನು ನಾಡಿನ ಜನರಿಗೆ ತಿಳಿಬೇಕು ಎಂದು ಉದ್ದಿಶ್ಯ ಇದ್ದಿದ್ದಾಗಿ ಸಿಎಂ ಹೇಳಿದರು. 

ಆದರೆ 13ನೇ ತಾರೀಖು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇದ್ದಿದ್ದರಿಂದ 13ನೇ ತಾರೀಖು ಕಾರ್ಯಕ್ರಮ ಏರ್ಪಡಿಸಲು ಆಗಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ವಾರ್ತಾ ಇಲಾಖೆಯಿಂದ 'ನುಡಿದಂತೆ ನಡೆದಿದ್ದೇವೆ' ಎಂಬ ಶಿರೋನಾಮೆಯ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು.  ಒಂದು ವರ್ಷದಲ್ಲಿ ಎರಡು ಆಯವ್ಯಯವನ್ನು ಮಂಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಸಿಎಂ ಹೇಳಿದರು.

ನಮಗೆ ಒಂದು ವರ್ಷದಲ್ಲಿ ಮೂರು ತಿಂಗಳುಗಳ ಕಾಲ ನೀತಿ ಸಂಹಿತೆ ಜಾರಿಗೆ ಬಂದಿದ್ದರೂ, ಪ್ರಾರಂಭವಾದ ಎಲ್ಲ ಕಾರ್ಯಕ್ರಮಗಳ ವೇಗ ಕಡಿಮೆಯಾಗಲಿಲ್ಲ ಎಂದು ಸಿಎಂ ಹೇಳಿದರು. ಆದರೆ ಹೊಸ ಕಾರ್ಯಕ್ರಮಗಳನ್ನು ಜಾರಿ ಮಾಡಲು ಆಗಲಿಲ್ಲ. ಕಳೆದ ಒಂದು ವರ್ಷದಲ್ಲಿ ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ 160 ಭರವಸೆಗಳಲ್ಲಿ  ಸುಮಾರು 90 ಭರವಸೆಗಳನ್ನು ಎರಡು ಆಯವ್ಯಯದ ಮೂಲಕ ಜಾರಿಗೆ ತಂದಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಅನ್ನಭಾಗ್ಯದಂತ ಯಶಸ್ವಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಸಿಎಂ ಹೇಳಿದರು.  ಅನ್ನಭಾಗ್ಯ ಕಾರ್ಯಕ್ರಮಕ್ಕೆ ಸರ್ಕಾರದ ಮೇಲಿದ್ದ ಹೊರೆ 900 ಕೋಟಿ ರೂ.ಈಗ ನಾವು ಒಂದು ರೂ.ಗೆ ಒಂದು ಕೆಜಿ ಅಕ್ಕಿ, ಒಂದು ಕುಟುಂಬಕ್ಕೆ 30 ಕೆಜಿ ಅಕ್ಕಿ ಕೊಡಲು ತೀರ್ಮಾನಿಸಿದ ಮೇಲೆ ಅದಕ್ಕೆ ತಗಲುವ ವೆಚ್ಚ 4300 ಕೋಟಿ ರೂಪಾಯಿಗಳು ಎಂದು ಸಿಎಂ ವಿವರಣೆ ನೀಡಿದರು. ರಾಜ್ಯದ ಎಲ್ಲೆಡೆ ಮೋದಿ ಅಲೆ ಕೆಲಸ ಮಾಡಿಲ್ಲ ಎಂದು ಈ ಸಂದರ್ಭದಲ್ಲಿ ಸಿಎಂ ಹೇಳಿದರು. ಲೋಕಸಭೆ ಫಲಿತಾಂಶ ತಮ್ಮ ಸರ್ಕಾರದ ಸಾಧನೆಗೆ ಅಳತೆಗೋಲಲ್ಲ ಎಂದು ಸಿಎಂ ಇದಕ್ಕೆ ಮುಂಚೆ ಹೇಳಿದ್ದರು.

ವೆಬ್ದುನಿಯಾವನ್ನು ಓದಿ