ನಿಗಮ ಮಂಡಳಿ ನೇಮಕ: ಕಾಂಗ್ರೆಸ್‌ ನಾಯಕರ ಕಣ್ಣು ವಿಧಾನಸೌಧದತ್ತ

ಸೋಮವಾರ, 15 ಸೆಪ್ಟಂಬರ್ 2014 (14:42 IST)
ಸಚಿವ ಸಂಪುಟ ಸೇರಲು ಒತ್ತಡ ತರುತ್ತಿರುವ ಹಲವು ಶಾಸಕರಿಗೆ ಪ್ರಮುಖ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಮನವೊಲಿಸಲು ಸಿದ್ದರಾಮಯ್ಯ ಯೋಚಿಸಿದ್ದಾರೆ. ಕೆಲವು ಶಾಸಕರ ಜೊತೆ ಈಗಾಗಲೇ ಒಂದು ಸುತ್ತಿನ ಚರ್ಚೆಯನ್ನೂ ನಡೆಸಿದ್ದಾರೆ. 
 
ಸಚಿವ ಸಂಪುಟ ವಿಸ್ತರಣೆಗೂ ಮೊದಲೇ ನಿಗಮ ಮತ್ತು ಮಂಡಳಿಗಳಿಗೆ ನೇಮಕಾತಿ ಪೂರ್ಣಗೊಳಿಸುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ನೀಡಿದೆ. ಸೆಪ್ಟೆಂಬರ್‌ ಅಂತ್ಯದೊಳಗೆ ನಾಮಕರಣ ಪ್ರಕ್ರಿಯೆ ಮುಗಿಸಲು ಮುಂದಾಗಿರುವ ಉಭಯ ನಾಯಕರು, ಪಟ್ಟಿಯನ್ನು ಅಂತಿಮಗೊಳಿಸುವ ಕಸರತ್ತಿಗೆ ಕೈ ಹಾಕಿದ್ದಾರೆ. ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಸೋಮವಾರ ಇಡೀ ದಿನವನ್ನು ಈ ಕೆಲಸಕ್ಕಾಗಿ ಕಾಯ್ದಿರಿಸಿಕೊಂಡಿದ್ದು, ಮೊದಲ ಪಟ್ಟಿಯನ್ನು ಅಂತಿಮಗೊಳಿಸುವ ಯೋಚನೆಯಲ್ಲಿದ್ದಾರೆ.
 
ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಒಂದೂ ಕಾಲು ವರ್ಷ ಕಳೆದಿದೆ. ಈವರೆಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕೆಲವು ಸ್ಥಾನಗಳಿಗೆ ಮಾತ್ರ ನಾಮಕರಣ ನಡೆದಿದೆ. ರಾಜ್ಯಮಟ್ಟದ ನಿಗಮ, ಮಂಡಳಿಗಳು, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಯೋಜನಾ ಪ್ರಾಧಿಕಾರಗಳಿಗೆ ಈವರೆಗೂ ನೇಮಕಾತಿ ನಡೆದಿಲ್ಲ. 70 ನಿಗಮ ಮಂಡಳಿಗಳು ಮತ್ತು 30 ನಗರಾಭಿವೃದ್ಧಿ ನಗರ ಯೋಜನಾ ಪ್ರಾಧಿಕಾರಗಳಲ್ಲಿ ಸ್ಥಾನ ಪಡೆಯಲು ಕಾಂಗ್ರೆಸ್‌ ಶಾಸಕರು, ಕಾರ್ಯಕರ್ತರು ಭಾರಿ ಪೈಪೋಟಿ ನಡೆಸುತ್ತಿದ್ದಾರೆ.
 
ಆದರೆ, ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರಿಗೆ ಮಂಡಳಿಗಳ ನೇಮಕಾತಿಯಲ್ಲಿ ಆದ್ಯತೆ ನೀಡಬೇಕೆಂಬ ಕೂಗು ಬಲವಾಗಿದೆ. ಶಾಸಕರು ಮತ್ತು ಕಾರ್ಯಕರ್ತರ ನಡುವೆ ಸ್ಥಾನ ಹಂಚಿಕೆಗೆ ಸೂತ್ರವೊಂದನ್ನು ರೂಪಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
 
ನಿಗಮ, ಮಂಡಳಿಗಳ ನೇಮಕಾತಿ ಕುರಿತು ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಸೋಮವಾರ ಸಭೆ ಸೇರುತ್ತಿದ್ದಾರೆ. ಸುಮಾರು 50 ಜನರ ಮೊದಲ ಪಟ್ಟಿ ಈ ಸಭೆಯಲ್ಲೇ ಅಂತಿಮಗೊಳ್ಳುವ ಸಾಧ್ಯತೆ ಇದೆ.
 

ವೆಬ್ದುನಿಯಾವನ್ನು ಓದಿ