ಕಾಂಗ್ರೆಸ್ ಹೈಕಮಾಂಡ್ ಆದೇಶವನ್ನು ಪಾಲಿಸಿದ ಸಚಿವ ಸಮೂಹ

ಸೋಮವಾರ, 29 ಸೆಪ್ಟಂಬರ್ 2014 (13:35 IST)
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಸಚಿವರು, ಶಾಸಕರು ಎರಡು ಹುದ್ದೆಗಳಲ್ಲಿ ಮುಂದುವರಿದಿದ್ದರು. ಇದು ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. ಒಂದಕ್ಕಿಂತ ಹೆಚ್ಚು ಹುದ್ದೆಗಳಲ್ಲಿ ಇರುವವರಿಂದ ರಾಜೀನಾಮೆ ಪಡೆಯುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಇತ್ತೀಚೆಗೆ ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದು, ನಿರ್ದೇಶನ ನೀಡಿದ್ದರು. ಆ ಬಳಿಕ ಎಲ್ಲ ಸಚಿವರು ಪಕ್ಷದ ಪದಾಧಿಕಾರಿಗಳ ಹುದ್ದೆ ತ್ಯಜಿಸಿದ್ದಾರೆ.
 
ಸಚಿವರಾದ ಆರ್‌.ರೋಷನ್‌ ಬೇಗ್‌, ಎಂ.ಎಚ್‌.ಅಂಬರೀಷ್‌ (ಉಪಾಧ್ಯಕ್ಷರು), ರಾಮಲಿಂಗಾ ರೆಡ್ಡಿ, ಡಾ.ಎಚ್‌. ಸಿ.ಮಹದೇವಪ್ಪ, ಸತೀಶ್‌ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಉಮಾಶ್ರೀ (ಪ್ರಧಾನ ಕಾರ್ಯದರ್ಶಿಗಳು) ಮತ್ತು ಯು.ಟಿ.ಖಾದರ್‌ (ಕಾರ್ಯದರ್ಶಿ) ಕೆಪಿಸಿಸಿ ಪದಾಧಿಕಾರಿಗಳ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
 
ಸಹಕಾರ ಸಚಿವ ಎಚ್‌.ಎಸ್‌. ಮಹದೇವ ಪ್ರಸಾದ್‌ (ಚಾಮರಾಜ ನಗರ), ಅರಣ್ಯ ಸಚಿವ ಬಿ.ರಮಾನಾಥ ರೈ (ದಕ್ಷಿಣ ಕನ್ನಡ), ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್‌ (ಬೆಂಗಳೂರು ನಗರ) ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ (ಗುಲ್ಬರ್ಗ) ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
 
ರಾಜೀನಾಮೆ ಅಂಗೀಕಾರ: ಈ ಎಲ್ಲರ ರಾಜೀನಾಮೆಗಳನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಅಂಗೀಕರಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಸಮಿತಿಗಳ ಅಧ್ಯಕ್ಷರ ಹುದ್ದೆ ತೆರವಾಗಿರುವ ಕಡೆಗಳಲ್ಲಿ ಉಪಾಧ್ಯಕ್ಷರುಗಳಿಗೆ ಹೊಣೆ ವಹಿಸಲಾಗಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
 
ಸಚಿವರು ಮತ್ತು ಶಾಸಕರು ಪಕ್ಷದ ಪದಾಧಿಕಾರಿಗಳ ಹುದ್ದೆಯನ್ನು ತ್ಯಜಿಸಬೇಕು ಎಂದು 2013ರಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ವರಿಷ್ಠರು ಸೂಚನೆ ನೀಡಿದ್ದರು.
 
ಕೆಲವು ಶಾಸಕರು ಮಾತ್ರ ಪಕ್ಷದ ಪದಾಧಿಕಾರಿಗಳ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇನ್ನೂ ಹಲವರು ಎರಡು ಹುದ್ದೆಗಳಲ್ಲಿ ಮುಂದುವರಿದಿದ್ದಾರೆ. ಅವರಿಂದ ಶೀಘ್ರದಲ್ಲೇ ರಾಜೀನಾಮೆ ಪಡೆಯಲಾಗುತ್ತದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.
 
ಅಧಿಕಾರ ಹಂಚಿಕೆಗೆ ಬಳಕೆ: ರಾಜ್ಯ ಸರ್ಕಾರದ ವಿವಿಧ ನಿಗಮ, ಮಂಡಳಿಗಳಿಗೆ ನಾಮಕರಣ ಮಾಡುವಂತೆ ಕಾಂಗ್ರೆಸ್‌ನ ಆರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಹಲವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಎಲ್ಲರಿಗೂ ನಾಮಕರಣ ಸ್ಥಾನಗಳನ್ನು ನೀಡಲಾಗದ ಇಕ್ಕಟ್ಟು ಎದುರಾಗಿರುವುದರಿಂದ, ತೆರವಾಗಿರುವ ಪಕ್ಷದ ಪದಾಧಿಕಾರಿಗಳ ಹುದ್ದೆಗೆ ಕೆಲವರನ್ನು ನೇಮಕ ಮಾಡುವ ಸಾಧ್ಯತೆ ಇದೆ.
 
ಒಬ್ಬ ವ್ಯಕ್ತಿ ಒಂದೇ ಹುದ್ದೆ ಹೊಂದಿರಬೇಕೆಂಬ ಕಾಂಗ್ರೆಸ್‌ ಹೈಕಮಾಂಡ್‌ನ ಆದೇಶವನ್ನು ಸಚಿವರು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. 12 ಸಚಿವರೂ ಸೇರಿದಂತೆ 15ಕ್ಕೂ  ಹೆಚ್ಚುಮಂದಿ ಕೆಪಿಸಿಸಿ ಪದಾಧಿಕಾರಿಗಳು ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ