ಜೆಡಿಎಸ್ ಪಕ್ಷದ ನಿರ್ನಾಮಕ್ಕೆ ಕಾಂಗ್ರೆಸ್ ಕುತಂತ್ರ: ದೇವೇಗೌಡರ ಗುಡುಗು

ಸೋಮವಾರ, 18 ಆಗಸ್ಟ್ 2014 (15:28 IST)
ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದ ಜೆಡಿಎಸ್‌ ಪಕ್ಷ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸುತ್ತಿದ್ದು,  ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಕಾಂಗ್ರೆಸ್ ಪಕ್ಷದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದರು. ಜೆಡಿಎಸ್‌ ಪಕ್ಷವನ್ನು ನಿರ್ನಾಮ ಮಾಡಲು ಕುತಂತ್ರ ನಡೆದಿದೆ. ಜೆಡಿಎಸ್ ಕಚೇರಿಯನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ದೇವೇಗೌಡರು ಗುಡುಗಿದರು. 

ಜೆಡಿಎಸ್ ಪಕ್ಷವನ್ನು ಅಳಿಸಿಹಾಕಲು ಸಂಚು ನಡೆಸಲಾಗುತ್ತಿದೆ. ಆದರೆ ಇದು ಇದು ಎಂದೆಂದಿಗೂ ಸಾಧ್ಯವಿಲ್ಲ ಎನ್ನುವುದನ್ನು ಅವರು ತಿಳಿದಿರಲಿ ಎಂದು ಖಾರವಾಗಿ ಹೇಳಿದರು. ಸಮಾವೇಶದಲ್ಲಿ  ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ, ಜಮೀರ್ ಅಹ್ಮದ್, ಗೈರುಹಾಜರಿಯಾಗಿರುವುದು ಜೆಡಿಎಸ್‌ ಆಂತರಿಕ ವಲಯದಲ್ಲಿ ಅತೃಪ್ತರ ಸಂಖ್ಯೆ ಏರುತ್ತಿರುವುದಕ್ಕೆ ಸಾಕ್ಷಿಯಾಯಿತು.  ಈ ನಡುವೆ ಸಮಾವೇಶಕ್ಕೆ ಗೈರಾಗಿರುವ ಶಾಸಕರ ಬಗ್ಗೆ ದೇವೇಗೌಡರು ಗರಂ ಆಗಿ ಮಾತನಾಡಿದರು.

ಏತನ್ಮಧ್ಯೆ  ನಾರಾಯಣ್ ರಾವ್ ಅವರನ್ನು ಹಂಗಾಮಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. "ನಾರಾಯಣ ರಾವ್ ಹಂಗಾಮಿ ರಾಜ್ಯಾಧ್ಯಕ್ಷರಷ್ಟೇ. ಎಲ್ಲರೊಂದಿಗೆ ಸಮಾಲೋಚನೆ ಮಾಡಿದ ಬಳಿಕ ಹೊಸ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುತ್ತೇನೆ"  ಎಂದು ದೇವೇಗೌಡರು ತಿಳಿಸಿದರು. 
ಮುಂದಿನ ಪುಟ ನೋಡಿ

ಜೆಡಿಎಸ್ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲಿ ಕಾರ್ಯಕರ್ತರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವುದಕ್ಕೆ ಮೈಕ್ ನೀಡಬೇಕೆಂದು ಕಿತ್ತಾಟವಾಡಲು ಷುರುಮಾಡಿದ್ದರಿಂದ ಒಂದು ಹಂತದಲ್ಲಿ ಗೊಂದಲದ ಪರಿಸ್ಥಿತಿ ಉದ್ಭವಿಸಿತು. ಆಗ ಇದರಿಂದ ಅಸಮಾಧಾನಗೊಂಡ ಕೆಲವು ಜೆಡಿಎಸ್ ಮುಖಂಡರು ವೇದಿಕೆಯಿಂದ ಕೆಳಕ್ಕಿಳಿದು ಹೊರಹೋದರು.

 ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಇವತ್ತಿನ ಚುನಾವಣೆ ಪದ್ಧತಿ ಯಾವರೀತಿಯಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನಮ್ಮ ನಾಯಕರೇ ಚುನಾವಣೆಯಲ್ಲಿ ಸೋತಮೇಲೆ ಪಕ್ಷಕ್ಕೆ ಭವಿಷ್ಯವಿದೆಯಾ ಎಂಬ ಭಾವನೆಗಳು ಕಾರ್ಯಕರ್ತರಲ್ಲಿ ಮೂಡಿರಬಹುದು. ಆದರೆ ಇಂತಹ ಭಾವನೆಯನ್ನು ಮನಸ್ಸಿನಿಂದ ಹೊರಹಾಕುವಂತೆ ನಾನು ಕಾರ್ಯಕರ್ತರಿಗೆ ಸೂಚಿಸುತ್ತೇನೆ.

ಈ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು  ಆಹುತಿ ತೆಗೆದುಕೊಳ್ಳಲು ಎರಡು ರಾಷ್ಟ್ರೀಯ ಪಕ್ಷಗಳು ಉದ್ದೇಶಿಸಿದ್ದು, ಅವುಗಳಿಗೆ ತಕ್ಕ ಉತ್ತರ ನೀಡುವುದು ನಮ್ಮ ಪಕ್ಷದ ಗುರಿಯಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಕೆಲವು ಪತ್ರಿಕೆಗಳಲ್ಲಿ ಬಂದಿರುವ ರಾಜಕೀಯ ವಿಶ್ಲೇಷಣೆಗಳು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನೆರವಾಗುತ್ತದೆಂದು ಭಾವಿಸುವುದಾಗಿ ಅವರು ಹೇಳಿದರು. 
 

ವೆಬ್ದುನಿಯಾವನ್ನು ಓದಿ