ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭದಲ್ಲೇ ವಿಫಲ: ಶಾಸಕರ ಮನವಿಗೆ ಸೊಪ್ಪಾಕದ ಸಿಎಂ ಸಿದ್ದು

ಬುಧವಾರ, 17 ಡಿಸೆಂಬರ್ 2014 (16:15 IST)
ಹಲವು ಸಚಿವರ ವಿರುದ್ಧ ಹಿರಿಯ ಶಾಸಕರು ದೂರು ನೀಡಿದ್ದಲ್ಲದೇ ಶಾಸಕರ ಪ್ರತ್ಯೇಕ ಸಭೆ ಕರೆಯಬೇಕು ಎನ್ನುವ ಒತ್ತಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿಹಾಕಿದ್ದರಿಂದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಆರಂಭದಲ್ಲಿಯೇ ವಿಫಲವಾಯಿತು ಎಂದು ಮೂಲಗಳು ತಿಳಿಸಿವೆ.  
 
ಸಚಿವರಿಲ್ಲದ ಶಾಸಕಾಂಗ ಸಭೆ ಕರೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಿಗೆ  ಸ್ಪಷ್ಟಪಡಿಸಿ, ಸಚಿವರ ವಿರುದ್ಧ ದೂರುಗಳಿದ್ದಲ್ಲಿ ಖಾಸಗಿಯಾಗಿ ಭೇಟಿ ಮಾಡಿ ಎಂದು ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಸಭೆಯಲ್ಲಿ ಪಕ್ಷದ ಹಲವು ಶಾಸಕರು ಭಾಗಿಯಾಗಿ  ಸಚಿವರ ವಿರುದ್ಧ ಹಲವು ದೂರುಗಳನ್ನು ನೀಡಬೇಕು ಎಂದಿದ್ದ ಹಿನ್ನೆಲೆಯಲ್ಲಿಯೇ ಸಿದ್ದರಾಮಯ್ಯ ಈ ಸಭೆಯನ್ನು ಕರೆದಿದ್ದರು ಎನ್ನಲಾಗಿದ್ದು, ಸಭೆಯಲ್ಲಿ ಸಚಿವರು  ಭಾಗಿಯಾದ ಹಿನ್ನೆಲೆಯಲ್ಲಿ ಶಾಸಕರು ದೂರು ನೀಡಲು ಹಿಂಜರಿದರು. ಈ ಹಿನ್ನೆಲೆಯಲ್ಲಿ ಸಭೆಯನ್ನು ಆರಂಭಕ್ಕೂ ಮುನ್ನವೇ ಅಂತ್ಯಗೊಳಿಸಲಾಯಿತು ಎಂದು ತಿಳಿದು ಬಂದಿದೆ. 
 
ಆದರೆ, ಇದೇ ವೇಳೆ ಸಭೆಯ ನೇತೃತ್ವವನ್ನು ಸಿಎಂ ಸಿದ್ದರಾಮಯ್ಯನವರು ವಹಿಸಿದ್ದ ಹಿನ್ನೆಲೆಯಲ್ಲಿ ಹಲವು ಹಿರಿಯ ಶಾಸಕರು ಗುಂಪು ಸಿಎಂ ಬಳಿ ತೆರಳಿ ಸಚಿವರನ್ನು ಹೊರತುಪಡಿಸಿ ಕೇವಲ ಶಾಸಕರೊಂದಿಗೆ ಮಾತ್ರವೇ ಸಭೆ ನಡೆಸಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಸಿಎಂ ಸಿದ್ದರಾಮಯ್ಯ ನಿರಾಕರಿಸಿದರು ಎನ್ನಲಾಗಿದೆ. 
 
ಸಭೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಹಾಗೂ ಸಚಿವರು ಪಾಲ್ಗೊಂಡಿದ್ದರು. ಆದರೆ ಸಭೆ ಫಲಪ್ರದವಾಗುವಲ್ಲಿ ವಿಫಲವಾಗಿದೆ ಎಂದು ತಿಳಿದು ಬಂದಿದೆ.  

ವೆಬ್ದುನಿಯಾವನ್ನು ಓದಿ