ಹಾವೇರಿಯ ಗುಡುಗೂರಿನಲ್ಲಿ ಕಾಂಗ್ರೆಸ್ ಬಹಿರಂಗ ಸಭೆ: ಬೃಹತ್ ಭದ್ರತೆ

ಶನಿವಾರ, 10 ಅಕ್ಟೋಬರ್ 2015 (12:28 IST)
ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಗುಡುಗೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಬಹಿರಂಗ ಸಮಾವೇಶವನ್ನು ಆಯೋಜಿಸಲಾಗಿದ್ದು, ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬಹಿರಂಗ ಭಾಷಣ ಮಾಡಲಿದ್ದಾರೆ. 
ರಾಹುಲ್ ಪ್ರಸ್ತುತ ಮೈದೂರು ಗ್ರಾಮದಲ್ಲಿದ್ದು, ಇಲ್ಲಿಂದಲೇ ಪಾದಯಾತ್ರೆ ಮೂಲಕ ತೆರಳಿ ಬಹಿರಂಗ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ರಾಹುಲ್ ಕೇಂದ್ರ ಬಿಂದುವಾಗಿರುವ ಕಾರಣ ಅತ್ಯಂತ ವೈಭವೋಪೇತ ವೇದಿಕೆ ಸಿದ್ಧವಾಗಿದ್ದು, ಹೆಚ್ಚು ಭದ್ರತೆ ಕಲ್ಪಿಸಲಾಗಿದೆ. 
 
ಸಭೆಯಲ್ಲಿ ರಾಜ್ಯದ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರಾದರೂ ವೇದಿಕೆಯ ಮೇಲೆ ಕೇವಲ ಆರು ಮಂದಿ ನಾಯಕರಿಗೆ ಮಾತ್ರವೇ ಸ್ಥಾನ ಒದಗಿಸಲಾಗಿದೆ. ಉಳಿತ 250 ಮಂದಿ ಗಣ್ಯರಿಗೆ ವೇದಿಕೆಯ ಮುಂಭಾಗದ ಬಲ ಹಾಗೂ ಎಡ ಭಾಗದಲ್ಲಿ ಸ್ಥಳಾವಕಾಶ ಮಾಡಿಕೊಡಲಾಗಿದ್ದರೆ, ಮಾಧ್ಯಮ ಪ್ರತಿನಿಧಿಗಳಿಗೆ ವೇದಿಕೆಯ ಮಧ್ಯ ಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ.  
 
ಇನ್ನು ಹೆಚ್ಚಿನ ಭದ್ರತೆಯ ಹಿತದೃಷ್ಠಿಯಿಂದ ಗ್ರಾಮದ ಸುತ್ತಲೂ 250ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ರಾಹುಲ್ ಆಗಮಿಸುವ ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಬೃಹತ್ ಬಹಿರಂಗ ಸಭೆಯು 15 ಎಕರೆ ಜಾಗದಲ್ಲಿ ನಡೆಯುತ್ತಿದ್ದು, 2000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬಹಿರಂಗ ಸಭೆಯಾದ ಕಾರಣ 10 ಮಂದಿ ಎಸ್‌ಪಿ, 10 ಮಂದಿ ಹೆಚ್ಚುವರಿ ಎಸ್‌ಪಿ ಸೇರಿದಂತೆ 6000ಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಸಭೆಗೆ ಯಾವುದೇ ತೊಂದರೆಯಾಗದಂತೆ ಹದ್ದಿನ ಕಣ್ಣಿರಿಸಿದ್ದಾರೆ. 
 
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಸಚಿವರಾದ ವಿನಯ್ ಕುಮಾರ್ ಸೊರಕೆ, ಹೆಚ್.ಕೆ. ಪಾಟೀಲ್, ಎಸ್.ಆರ್.ಪಾಲೀಟ್ ಸೇರಿದಂತೆ ರಾಜ್ಯದ ಇತರೆ ನಾಯಕರು ಭಾಗಿಯಾಗಲಿದ್ದಾರೆ. 

ವೆಬ್ದುನಿಯಾವನ್ನು ಓದಿ