ಕಾಂಗ್ರೆಸ್ ಶಾಸಕಾಂಗ ಸಭೆ: ರವಿ ಪ್ರಕರಣದಲ್ಲಿ ಶಾಸಕರ ಅಸಮಧಾನ

ಬುಧವಾರ, 25 ಮಾರ್ಚ್ 2015 (11:26 IST)
ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಡಿ.ಕೆ.ರವಿ ಅವರ ನಿಗೂಢ ಸಾವು ಪ್ರಕರಣವನ್ನು ಸರ್ಕಾರ ನಿಭಾಯಿಸುತ್ತಿರುವ ರೀತಿಯ ಬಗ್ಗೆ ಪಕ್ಷದ ಕೆಲ ಶಾಸಕರು ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. 
 
ಸಿಎಂ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಪಕ್ಷದ ಎಲ್ಲಾ ಶಾಸರು ಹಾಗೂ ಸಚಿವರು ಪಾಲ್ಗೊಂಡಿದ್ದು, ಶಾಸಕರು ಸಚಿವರ ವಿರುದ್ಧ ಗರಂ ಆಗಿದ್ದಾರೆ ಎನ್ನಲಾಗಿದೆ. 
 
ರವಿ ಅವರ ಪ್ರಕರಣದಲ್ಲಿ ಸರ್ಕಾರ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸುತ್ತಿದ್ದಾಗ ಸರ್ಕಾರದ ಅಥವಾ ಪಕ್ಷದ ಪರವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಯಾವೊಬ್ಬ ಸಚಿವರೂ ಕೂಡ ಬೆಂಬಲಿಸಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಕೋಲಾಹಲ ನಡೆಯುತ್ತಿದ್ದಾಗ ಕೇವಲ ನಾಲ್ಕೈದು ಸಚಿವರು ಮಾತ್ರ ಕಾಣಿಸಿಕೊಂಡಿದ್ದರು. ಇವರನ್ನು ಬಿಟ್ಟರೆ ಸರ್ಕಾರದಲ್ಲಿ ಉಳಿದ ಸಚಿವರಿಲ್ಲವೇ, ಕೇವಲ ಅಧಿಕಾರಕ್ಕೆ ಮಾತ್ರ ಸಚಿವರಾಗಿ ಮುಂದುವರಿಯುತ್ತಿದ್ದಾರೆ ಎಂದು ಸಭೆಯಲ್ಲಿ ಪ್ರಶ್ನಿಸುವ ಮೂಲಕ ಸರ್ಕಾರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. 
 
ಇದೇ ವೇಳೆ, ಸಿಎಂ ಸಿದ್ದರಾಮಯ್ಯನವರೂ ಕೂಡ ವಿಪಕ್ಷಗಳ ವಿರುದ್ಧ ಗರಂ ಆಗಿದ್ದು, ವಿಪಕ್ಷಗಳ ನಾಯಕರು ವಿನಾಃ ಕಾರಣ ತಮ್ಮ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ರಾಜಕೀಯ ಕುತಂತ್ರವನ್ನು ಸಾಧಿಸುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಬೇಕಿದೆ ಎಂದರು. ಇದಕ್ಕೆ ಪಕ್ಷದ ಎಲ್ಲಾ ಸದಸ್ಯರು ಬೆಂಬಲಿಸಿದರು ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ