ಉಪಲೋಕಾಯುಕ್ತರ ಪದಚ್ಯುತಿಗೆ ಕಾಂಗ್ರೆಸ್‌‌ನ ಕೆಲವು ಶಾಸಕರ ಅಪಸ್ವರ

ಗುರುವಾರ, 26 ನವೆಂಬರ್ 2015 (11:40 IST)
ಉಪಲೋಕಾಯುಕ್ತ ಸುಭಾಷ್ ಬಿ ಆಡಿ ಅವರ  ಪದಚ್ಯುತಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಕೆಲವು ಶಾಸಕರು ಅಪಸ್ವರವೆತ್ತಿದ್ದಾರೆ. ಈ ಕುರಿತು ಮುಂಚಿತವಾಗಿ ಚರ್ಚೆ ನಡೆಸದೇ ಏಕಾಏಕಿ ನಿರ್ಧಾರ ಕೈಗೊಂಡಿದ್ದೇಕೆ  ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಅದರಲ್ಲೂ ಲಿಂಗಾಯತ ಸಮುದಾಯದ ಮುಖಂಡರು ಕಾಂಗ್ರೆಸ್ ನಿಲುವಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಲೋಕಾಯುಕ್ತ ಭಾಸ್ಕರರಾವ್ ಪದಚ್ಯುತಿ ಜತೆ ಉಪಲೋಕಾಯುಕ್ತರ ಪದಚ್ಯುತಿ ಮಾಡುವುದಕ್ಕಾಗಿ ಸಹಿ ಸಂಗ್ರಹವನ್ನು ಕಾಂಗ್ರೆಸ್  ಮಾಡಿತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ಅಸಮಾಧಾನ ಪ್ರತಿಧ್ವನಿಸಿದೆ. 
 
ನಿನ್ನೆ ನಡೆದ ವಿಧಾನಸಭೆ ಕಲಾಪದಲ್ಲಿ ಕೂಡ  ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ ಆಡಿ  ಪದಚ್ಯುತಿಗಾಗಿ ಸಹಿ ಸಂಗ್ರಹಕ್ಕೆ ಯತ್ನಿಸುತ್ತಿರುವ ಕಾಂಗ್ರೆಸ್ ನಿರ್ಧಾರಕ್ಕೆ ಬಿಜೆಪಿ ಗರಂ ಆಗಿತ್ತು. ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ವ್ಯಕ್ತಪಡಿಸಿದ್ದರು.  ಇಡೀ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಹಾಕಲು ಸರ್ಕಾರ ಹೊರಟಿದೆ ಎಂದು ಬಿಜೆಪಿಯ ಜಗದೀಶ್ ಶೆಟ್ಟರ್ ಆರೋಪಿಸಿದ್ದರು. 
 
ಸ್ಪೀಕರ್ ಮೊದಲಿಗೆ ಪ್ರತಿಪಕ್ಷದ ಶಾಸಕರನ್ನು ಸಮಾಧಾನ ಪಡಿಸುವ ನಿರ್ಧಾರ ಮಾಡಿದರು. ಆದರೆ ಮಾಧ್ಯಮಕ್ಕೆ ಸುಭಾಷ್ ಬಿ ಆಡಿ ಹೇಳಿಕೆ ನೀಡಿದ್ದಕ್ಕೆ ಸ್ಪೀಕರ್ ಕಾಗೋಡು ಅಸಮಾಧಾನ ವ್ಯಕ್ತಪಡಿಸಿದ್ದರು.  ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದರು. 

ವೆಬ್ದುನಿಯಾವನ್ನು ಓದಿ