ಸಂಖ್ಯಾಬಲವಿದ್ದರೂ ಜಿಲ್ಲಾಧ್ಯಕ್ಷ ಸ್ಥಾನ ಜೆಡಿಎಸ್ ಪಾಲು: ಶಾಸಕರ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಕೆಂಗಣ್ಣು

ಶುಕ್ರವಾರ, 31 ಜುಲೈ 2015 (13:43 IST)
ಕಾಂಗ್ರೆಸ್ ಸದಸ್ಯರ ಸಂಖ್ಯೆ ಹೆಚ್ಚಿದ್ದರೂ ಕೂಡ ನಮ್ಮದೇ ನಾಯಕರ ಕುಮ್ಮಕ್ಕಿನಿಂದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿದ್ದು, ಅಂತಹ ಪಕ್ಷ ವಿರೋಧಿ ನಾಯಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶೀಘ್ರವೇ ಕೆಪಿಸಿಸಿಗೆ ಒತ್ತಾಯಿಸುತ್ತೇನೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಅವರು ಇಂದು ಆಕ್ರೋಶ ಭರಿತರಾಗಿ ನುಡಿದಿದ್ದಾರೆ. 
 
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಬಲ ಪಕ್ಷ ಎನಿಸಿರುವ ನಮ್ಮ ಕಾಂಗ್ರೆಸ್ ಪಕ್ಷ ಒಟ್ಟು 27 ಜಿಲ್ಲಾ ಪಂಚಾಯತ್ ಸ್ಥಾನಗಳ ಪೈಕಿ 15ನ್ನು ಕಬಳಿಸಿತ್ತು. ಆದ ಕಾರಣ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನ ಕಾಂಗ್ರೆಸ್‌ಗೇ ಒಲಿಯುವುದು ಸನ್ನಿಹಿತವಾಗಿತ್ತು. ಆದರೆ ಜಿಲ್ಲೆಯಲ್ಲಿನ ಕೆಲ ಕಾಂಗ್ರೆಸ್ ನಾಯಕರೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ಅಧ್ಯಕ್ಷರ ಸ್ಥಾನ ಜೆಡಿಎಸ್ ಪಾಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬೆಳವಣಿಗೆಗೆ ಕಾರಣರಾದ ನಾಯಕರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. 
 
ಇದೇ ವೇಳೆ, ಈ ಎಲ್ಲಾ ಬೆಳವಣಿಗೆಗಳಿಗೆ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ, ಪ್ರಸ್ತುತ ವಿಧಾನಸಭಾ ಉಪಾಧ್ಯಕ್ಷರಾಗಿರುವ ಎನ್.ಹೆಚ್.ಶಿವಶಂಕರರೆಡ್ಡಿ ಹಾಗೂ ಮಾಜಿ ಸಚಿವ ವಿ.ಮುನಿಯಪ್ಪ ಅವರೇ ಕಾರಣರಾಗಿದ್ದು, ಅವರ ಕುಮ್ಮಕ್ಕಿನಿಂದ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿದೆ ಎಂದು ನೇರವಾಗಿ ಆರೋಪಿಸಿದರು. 
 
ಬಳಿಕ, ಚುನಾವಣೆಯು ಜುಲೈ 27ರಂದು ನಡೆದಿದ್ದು, ಜೆಡಿಎಸ್ ಸದಸ್ಯರು ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮರುದಿನ ಪಕ್ಷದ ಸಭೆ ಕರೆಯಲಾಗಿತ್ತು. ಆದರೆ ಸಭೆಯಲ್ಲಿ ನಮ್ಮದೇ ಕಾಂಗ್ರೆಸ್ ಸದಸ್ಯರು ಪಕ್ಷ ವಿರೋಧಿಯಾಗಿ ನಡೆದುಕೊಂಡರು. ಈ ಹಿನ್ನೆಲೆಯಲ್ಲಿ ಈಗಾಗಲೇ 8 ಮಂದಿ ಕಾಂಗ್ರೆಸ್ ಸದಸ್ಯರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಅಲ್ಲದೆ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿಗೆ ವರದಿ ಸಲ್ಲಿಸಲಿದ್ದೇನೆ. ಪಕ್ಷದ ಮುಂದೆ ಯಾರೂ ದೊಡ್ಡವರಲ್ಲ ಎಂದರು. 
 
ಒಟ್ಟು 27 ಸ್ಥಾನಗಳ ಪೈಕಿ ಜೆಡಿಎಸ್ 3 ಸ್ಥಾನಗಳನ್ನು ಗಳಿಸಿತ್ತು. ಆದರೂ ಕಾಂಗ್ರೆಸ್‌ನವರ ಕುಮ್ಮಕ್ಕಿನಿಂದ ಜೆಡಿಎಸ್‌ನ ಮುನೇಗೌಡ ಅವರು ಅಧ್ಯಕ್ಷ ಗದ್ದುಗೆ ಏರಿರುವುದು ಪ್ರಸ್ತುತ ಮುನಿಕೃಷ್ಣಪ್ಪ ಅವರ ಕೆಂಗಣ್ಣಿಗೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ