ಕಲುಶಿತ ನೀರು, ಹೊಗೆಯಿಂದ ದುಷ್ಪರಿಣಾಮ: ಪ್ರತಿಭಟನೆ

ಸೋಮವಾರ, 2 ಮಾರ್ಚ್ 2015 (10:49 IST)
ಕೆಎಂಎಫ್ ಹಾಲು ಮಂಡಳಿಯಿಂದ ಬಿಡುಗಡೆಯಾಗುತ್ತಿರುವ ಕಲುಶಿತ ನೀರು ಹಾಗೂ ಹೊಗೆಯಿಂದ ಸಾರ್ವಜನಿಕರ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿರುವ ಇಲ್ಲಿನ ಸಾರ್ವಜನಿಕರು, ನಗರದ ಮಹಾಂತೇಶ ನಗರದಲ್ಲಿರುವ ಹಾಲು ಮಂಡಳಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.  
 
ಕಚೇರಿಯಲ್ಲಿ ದಿನನಿತ್ಯ ಕೈಗೊಳ್ಳುವ ಹಾಲು ಶೇಖರಣಾ ಹಾಗೂ ರವಾನೆ ಪ್ರಕ್ರಿಯೆಯಲ್ಲಿ ಕಲುಶಿತ ನೀರು ಹಾಗೂ ಹೊಗೆ ಹೊರ ಸೂಸುತ್ತಿದ್ದು, ಇದರಿಂದ ಇಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಪರಿಸರವನ್ನು ಸಂರಕ್ಷಿಸಿ ಎಂದು ಹಲವು ಬಾರಿ ಮನವಿ ಮಾಡಿಕೊಂಡರೂ ಕೂಡ ಕಚೇರಿಯ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. 
 
ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಸಾರ್ವಜನಿಕರು, ಹಾಲಿನ ಪಾಕೆಟ್‌ಗಳನ್ನು ಕಚೇರಿಯಿಂದ ಆಚೆಗೆ ಎಸೆದು, ಅಲ್ಲದೆ ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ