ನ್ಯಾಯಾಂಗ ನಿಂದನೆ ಆರೋಪ: ಬೆಷರತ್ ಕ್ಷಮೆ ಯಾಚಿಸಿದ ಮಂತ್ರಿ

ಮಂಗಳವಾರ, 6 ಅಕ್ಟೋಬರ್ 2015 (14:50 IST)
ಬೆಳ್ಳಂದೂರು ಕೆರೆ ಒತ್ತುವರಿ ವಿಚಾರದಲ್ಲಿ ಮಂತ್ರಿ ಡೆವಲಪರ್ಸ್ ಸಂಸ್ಥೆ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ಇಂದು ಇತ್ಯರ್ಥಪಡಿಸಿದೆ. 
 
ನ್ಯಾಯಾಂಗ ನಿಂದನೆ ನಡೆದಿದೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಮಂತ್ರಿ ಡೆವಲಪರ್ಸ್‌ನ  ವ್ಯವಸ್ಥಾಪಕ ನಿರ್ದೇಶಕ ಸುಶೀಲ್ ಮಂತ್ರಿ ಅವರಿಗೆ ನ್ಯಾಯಾಧೀಕಱಣವು ನೋಟಿಸ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಸುಶೀಲ್ ಮಂತ್ರಿ, ಸಮಿತಿಗೆ ಅಡ್ಡಿಪಡಿಸಬೇಕೆಂಬ ಯಾವುದೇ ಉದ್ದೇಶ ಇರಲಿಲ್ಲ. ಅಲ್ಲದೆ ಸಮಿತಿಯ ಯಾವ ಸದಸ್ಯರಿಗೂ ಕೂಡ ಅಪಮಾನ ಮಾಡಿಲ್ಲ ಎಂದು ಬೆಷರತ್ ಕ್ಷಮೆ ಯಾಚಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಕರಣವು ಮನ್ನಿಸಿ ಕಂಪನಿಯ ವಿರುದ್ಧ ಇದ್ದ ದೂರನ್ನು ಇತ್ಯರ್ಥಗೊಳಿಸಿದೆ. 
 
ಇನ್ನು ಕೆರೆ ಒತ್ತುವರಿಯಾಗಿದೆ ಎಂಬ ಕಾರಣದಿಂದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ಮಂತ್ರಿ ಡೆವಲಪರ್ಸ್ ಕಂಪನಿಯ ಜಾಗ ಹಾಗೂ ಕೆರೆಯನ್ನು ಸಮೀಕ್ಷೆ ನಡೆಸಲು ರಾಮಚಂದ್ರನ್ ನೇತೃತ್ವದಲ್ಲಿ ಸಮಿತಿ ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಸೆ.11 ರಂದು ಬೆಂಗಳೂರಿಗೆ ಆಗಮಿಸಿದ್ದ ಎನ್‌ಜಿಟಿ ಸಮಿತಿ ಸಮೀಕ್ಷೆ ಮಾಡಲು ಮುಂದಾಗಿತ್ತು. ಆದರೆ ಈ ವೇಳೆ ಡೆವಲಪರ್ಸ್ ಸಿಬ್ಬಂದಿಗಳು ಸದಸ್ಯರಿಗೆ ಸಮೀಕ್ಷೆ ನಡೆಸದಂತೆ ಅಡ್ಡಿ ಪಡಿಸಿದ್ದರು. ನ್ಯಾಯಾಂಗ ನಿಂದನೆಯಾಗಿದೆ ಎಂದು ಆರೋಪಿಸಿ ಮಂತ್ರಿ ಡೆವಲಪರ್ಸ್ ವಿರುದ್ಧ ನವಬೆಂಗಳೂರು ಫೌಂಡೇಶನ್ ಎಂಬ ಸರ್ಕಾರೇತರ ಸಂಘ ಸಂಸ್ಥೆಯೊಂದು ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಕರಣವು ನೋಟಿಸ್ ನೀಡಲಾಗಿತ್ತು. ವಿಚಾರಣೆ ವೇಳೆ, ಎನ್‌ಜಿಒ ಪರ ವಕೀಲರು ವಾದ ಮಂಡಿಸಿ ಕಟ್ಟಡ ಕಾಮಗಾರಿಗಾಗಿ ತೆಗೆದುಕೊಂಡಿದ್ದ ಪ್ಲ್ಯಾನ್ ಅವಧಿ ಮುಗಿದಿದೆ. ಹೊಸ ಪ್ಲ್ಯಾನ್‌ಗೆ ಅನುಮೋದನೆ ಪಡೆದಿಲ್ಲ. ಹಾಗಾಗಿ ಕಟ್ಟಡ ನಿರ್ಮಾಣ ಕಾಮಗಾರಿಗೆ ತಡೆ ನೀಡಬೇಕೆಂದು ವಾದಿಸಿದರು. 
 
ಇನ್ನು ಮಂತ್ರಿ ಡೆವಲಪರ್ಸ್ ವಿರುದ್ಧ ಬೆಳ್ಳಂದೂರು ಕೆರೆ ಒತ್ತುವರಿ ಮಾಡಿಕೊಂಡು ಕಟ್ಟಡ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪವಿದೆ. 

ವೆಬ್ದುನಿಯಾವನ್ನು ಓದಿ