'ಲೋಕಾ' ಭ್ರಷ್ಟಾಚಾರ ಪ್ರಕರಣ: ಅಶ್ವಿನ್ ರಾವ್ ಆಗಸ್ಟ್ 6ರ ವರೆಗೆ ಎಸ್ಐಟಿ ವಶಕ್ಕೆ

ಮಂಗಳವಾರ, 28 ಜುಲೈ 2015 (17:33 IST)
ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಹೈದರಾಬಾದ್ ನಲ್ಲಿ ಬಂಧಿಸಲಾಗಿದ್ದ ಪ್ರಕಱಣದ ಪ್ರಮುಖ ಆರೋಪಿ ಅಶ್ವಿನ್ ರಾವ್ ನನ್ನು ಲೋಕಾಯುಕ್ತ ವಿಶೇಷ ಕೋರ್ಟ್ 9 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ. 
 
ಬಂಧಿಸಲಾಗಿದ್ದ ಹಿನ್ನೆಲೆಯಲ್ಲಿ ಆಱೋಪಿ ಅಶ್ವಿನ್ ನನ್ನು ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ವೇಳೆ, ಸರ್ಕಾರಿ ಅಭಿಯೋಜಕ ಜನಾರ್ಧನ್ ಅವರು 10 ದಿನಗಳ ಕಾಲ ಎಸ್ಐಟಿಗೆ ವಹಿಸಬೇಕೆಂದು ಹಾಗೂ ಎಸ್ಐಟಿ ತನಿಖಾಧಿಕಾರಿ ಲಾಬೂರಾಂ ಅವರು, ಆಱೋಪಿ ಅಶ್ವಿನ್ ಸಾಕಷ್ಟು ಜನರಿಗೆ ವಿವಿಧ ನಂಬರ್ ಗಳಿಂದ ದೂರವಾಣಿ ಕರೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆಗಾಗಿ ಹೊರ ರಾಜ್ಯಗಳಿಗೆ ತೆರಳುವ ಸನ್ನಿವೇಶಗಳಿವೆ. ಆದ್ದರಿಂದ 14 ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪರಾಮರ್ಶೆ ನಡೆಸಿದ ನ್ಯಾಯಾಧೀಶರು, ಕೊನೆಗೂ 9 ದಿನಗಳ ಕಾಲ ಅಂದರೆ ಆಗಸ್ಟ್ 6ರ ವರೆಗೆ ಎಸ್ಐಟಿ ವಶಕ್ಕೆ ನೀಡಿ ಆದೇಶಿಸಿದೆ. ಇದೇ ವೇಳೆ, ಆರೋಪಿ ಅಶ್ವಿನ್‌ಗೆ ಸಮಯಕ್ಕೆ ಸರಿಯಾಗಿ ಆಹಾರ ಮತ್ತು ಆರೋಗ್ಯಕ್ಕೆ ಚಿಕಿತ್ಸೆ ನೀಡುವಂತೆ ಸೂಚಿಸಿದೆ. 
 
ಇನ್ನು ಆರೋಪಿ ಅಶ್ವಿನ್ ರಾವ್ ನನ್ನು ಎಸ್ಐಟಿಯ ತನಿಖಾಧಿಕಾರಿಗಳ ಐವರ ತಂಡ ನಿನ್ನೆ ಹೈದರಾಬಾದ್ ನ ರೈನ್ ಬೋ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ಬಂಧಿಸಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು. ಇಂದು ಬೆಳಗ್ಗೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ