ಗುಜರಾತಿನಲ್ಲಿ ಕೋಟ್ಯಧಿಪತಿ ಕಾರ್ಮಿಕರು: ಮಾಲೀಕರಿಗೆ ಸಮಸ್ಯೆ

ಮಂಗಳವಾರ, 8 ಡಿಸೆಂಬರ್ 2015 (19:40 IST)
ಸಾನಂದ್ ಪಟ್ಟಣದಲ್ಲಿ ಅಸಾಮಾನ್ಯ ಎಚ್‌ಆರ್ ಸಮಸ್ಯೆಯನ್ನು ಅಲ್ಲಿನ ಕಾರ್ಖಾನೆಗಳು ಎದುರಿಸುತ್ತಿವೆ.  ಸಾನಂದ್ ಸುತ್ತಮುತ್ತ ಭೂಮಾಲೀಕರಿಗೆ 2000 ಕೋಟಿ ರೂ. ಹರಿದುಬಂದಿದೆ. ಗುಜರಾತ್ ಸರ್ಕಾರ ಕಳೆದ ಏಳು ವರ್ಷಗಳಲ್ಲಿ 4000 ಹೆಕ್ಟೇರ್ ಪ್ರದೇಶವನ್ನು ಸ್ವಾಧೀನಕ್ಕೆ ತೆಗೆದುಕೊಂಡಿದೆ.  ಅನೇಕ ಸ್ಥಳೀಯ ಭೂಮಾಲೀಕರು ತಮ್ಮ ಭೂಮಿಯನ್ನು ಕೈಗಾರಿಕೀಕರಣಕ್ಕಾಗಿ ಕೊಟ್ಟಿದ್ದು, ರಾತ್ರೋರಾತ್ರಿ ಕೋಟ್ಯಧಿಪತಿಗಳಾಗಿ ಪರಿವರ್ತನೆಯಾಗಿದ್ದಾರೆ.

ಅವರಲ್ಲಿ ಅನೇಕ ಮಂದಿ ಮೆಷಿನ್ ಆಪರೇಟರ್, ಫ್ಲೂರ್ ಸೂಪರ್ ವೈಸರ್, ಭದ್ರತಾ ಸಿಬ್ಬಂದಿ,ಪ್ಯೂನ್ ಹುದ್ದೆಯಲ್ಲಿದ್ದಾರೆ.  ರವಿರಾಜ್ ಫಾಯಿಲ್ಸ್ ಲಿ.ನ 300 ಕಾರ್ಮಿಕರ ಪೈಕಿ 150 ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ತಲಾ ಒಂದು ಕೋಟಿಗಿಂತ ಹೆಚ್ಚು ನಗದನ್ನು ಇರಿಸಿದ್ದಾರೆ. ಆದರೆ ಅವರ ವೇತನ ಮಾತ್ರ ಮಾಸಿಕ 9000ದಿಂದ 20,000 ರೂ.ಗಳು.
 
ಈಗ ಅವರನ್ನು ಕಾರ್ಮಿಕರಾಗಿ ಉಳಿಸಿಕೊಳ್ಳುವುದು ಮಾಲೀಕರಿಗೆ ಕಷ್ಟವಾಗಿದೆ.  ಈಗ ಅವರಿಗೆ ಉದ್ಯೋಗ ಆದಾಯದ ಮುಖ್ಯ ಮೂಲವಾಗಿ ಉಳಿದಿಲ್ಲ ಎಂದು ರವಿರಾಜ್ ಫಾಯಿಲ್ಸ್ ಅಧ್ಯಕ್ಷ , ವ್ಯವಸ್ಥಾಪಕ ನಿರ್ದೇಶಕ ಜಯದೀಪ್ ಸಿನ್ಹ್ ವಘೇಲಾ ಹೇಳಿದ್ದಾರೆ. 
 
ಟಾಟಾ ಮೋಟರ್ಸ್ ನ್ಯಾನೋ ಕಂಪನಿ ಅಲ್ಲಿಗೆ ಸ್ಥಳಾಂತರಗೊಂಡ ಬಳಿಕ ಸಾನಂದ್ ಶೀಘ್ರ ಕೈಗಾರಿಕೀಕರಣವನ್ನು ಕಂಡಿದೆ.  ಗುಜರಾತ್ ಕೈಗಾರಿಕೆ ಅಭಿವೃದ್ಧಿ ನಿಗಮವು ಬೋಲ್, ಹಿರಾಪುರ್ ಮತ್ತು ಕೋರಾಜ್ ಗ್ರಾಮಗಳಲ್ಲಿ ಭೂಮಿಯನ್ನು ವಶಪಡಿಸಿಕೊಂಡಿದ್ದು, 200 ದೊಡ್ಡ ಮತ್ತು ಸಣ್ಣ ಕಂಪನಿಗಳು ಅಲ್ಲಿ ಘಟಕಗಳನ್ನು ಸ್ಥಾಪಿಸಿವೆ. ಭಾರೀ ಮೊತ್ತದ ಪರಿಹಾರವನ್ನು ಪಡೆದವರು ಭೂಮಿ, ಚಿನ್ನ ಮತ್ತು ಬ್ಯಾಂಕ್ ಠೇವಣಿಗಳಲ್ಲಿ ಹಣವನ್ನು ತೊಡಗಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ