'ಲೋಕಾ'ದಲ್ಲಿ ಭ್ರಷ್ಟಾಚಾರ ಪ್ರಕರಣ: ಸ್ಫೋಟಕ ಮಾಹಿತಿ ತೆರೆದಿಟ್ಟ 420 ಭಾಸ್ಕರ್

ಗುರುವಾರ, 23 ಜುಲೈ 2015 (16:13 IST)
ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಹಿರಂಗಗೊಂಡಿರುವ ಆಡಿಯೋ ಕ್ಲಿಪ್‌ನಲ್ಲಿ ಕೆಲವು ಸ್ಫೋಟಕ ಮಾಹಿತಿಗಳಿದ್ದು, ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೇಸರೂ ಕೂಡ ಕೇಳಿ ಬಂದಿದೆ. 
 
ತಮ್ಮ ಸ್ನೇಹಿತ ವಕೀಲರೋರ್ವರೊಂದಿಗೆ ರಾಜ್ಯದ ಲೋಕಾಯುಕ್ತ ಸಂಸ್ಥೆಯ ಮುಖ್ಯ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಸ್ವಯಂ ಘೋಷಿತ ನಿಕಟವರ್ತಿ ವಿ.ಭಾಸ್ಕರ್ ಎಂಬುವವರು ಚರ್ಚಿಸುತ್ತಿದ್ದರು. ಈ ವೇಳೆ ಚರ್ಚೆಯಲ್ಲಿ ಭಾಗಿಯಾಗಿದ್ದ ವಕೀಲರು ಭಾಸ್ಕರ್ ಅವರ ಎಲ್ಲಾ ಸಂಭಾಷಣೆಗಳನ್ನು (ರೆಕಾರ್ಡ್)ದಾಖಲಿಸಿಕೊಂಡಿದ್ದಾರೆ. 
 
ಈ ಆಡಿಯೋ ಕ್ಲಿಪ್ ಒಟ್ಟು 42 ನಿಮಿಷಗಳ ಸಂಭಾಷಣೆಯನ್ನು ಹೊಂದಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.  
 
ಸಿಎಂ ಸಿದ್ದರಾಮಯ್ಯ ಬಗೆಗಿನ ಸ್ಫೋಟಕ ಮಾಹಿತಿ ಏನು ?:
ಕಾರ್ಯ ನಿರ್ಮಿತ್ತ ದೆಹಲಿಗೆ ತೆರಳಲು ಸಿದ್ದರಾಮಯ್ಯ ಸಿದ್ದರಿದ್ದರು. ಈ ವೇಳೆ ಲೋಕಾಯುಕ್ತ ನ್ಯಾ.ವೈಭಾಸ್ಕರ್ ರಾವ್ ಹಾಗೂ ಅವರ ಪುತ್ರರೊಂದಿಗೆ ನಾನೂ ಕೂಡ ಅವರೊಂದಿಗೆ ತೆರಳಿದ್ದೆ. ಇನ್ನು ಜೆಟ್ ಏರ್‌ವೇಸ್ ವಿಮಾನದಲ್ಲಿ ರಾಜಧಾನಿ ದೆಹಲಿಗೆ ಬ್ಯುಸಿನೆಸ್ ಕ್ಯಾಟೆಗೆರಿ ಸೀಟ್‌ನಲ್ಲಿ ತೆರಳಿದ್ದೆವು.
 
ವಿಮಾನದಲ್ಲಿ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಹಾಗೂ ಸಿಎಂ ಸಿದ್ದರಾಮಯ್ಯ ಒಂದು ಸೀಟಿನಲ್ಲಿ ಕುಳಿತಿದ್ದರೆ, ಅವರ ಹಿಂಭಾಗದಲ್ಲಿ ನಾನು ಹಾಗೂ ಭಾಸ್ಕರ್ ರಾವ್ ಅವರ ಪುತ್ರ ಕುಳಿತಿದ್ದೆವು. ದೆಹಲಿ ತಲುಪಿದ ಬಳಿಕ ಇಬ್ಬರು ಗಣ್ಯರಿಗೆ ಬೊಕ್ಕೆ ನೀಡಿ ಸ್ವಾಗತಿಸಿದೆವು. ಬಳಿಕ ವಾಪಾಸಾಗಿದ್ದೆವು ಎಂದಿದ್ದಾನೆ. 
 
ಸಿಎಂ ನನಗೆ ಪರಿಚಯವಿದ್ದರೂ ಅವರ ಬಳಿ ನಾನು ಎಂದಿಗೂ ಹೋದವನಲ್ಲ. ಏಕೆಂದರೆ ನನಗೆ ಆಗಬೇಕಿದ್ದ ಎಲ್ಲಾ ಕೆಲಸಗಳೂ ಕೂಡ ಆಗುತ್ತಿದ್ದವು ಎಂದೂ ಹೇಳಿದ್ದಾನೆ. ಅಲ್ಲದೆ ಭಾಸ್ಕರ್ ರಾವ್ ಅವರಿಗೆ ಮುಂದಿನ ರಾಜ್ಯಪಾಲರನ್ನಾಗಿ ಮಾಡುವ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದವು ಎಂದಿದ್ದಾನೆ. 
 
ಈ ಎಲ್ಲಾ ಸಂಗತಿಗಳೂ ಕೂಡ ಸಿಎಂ, ಲೋಕಾಯುಕ್ತ ಭಾಸ್ಕರ್ ರಾವ್ ಹಾಗೂ ಇತರರ ನಡುವೆ ಎಂತಹ ಸಂಬಂಧವಿತ್ತು, ಅಧಿಕಾರವನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದರು ಎಂಬುದನ್ನು ತೋರಿಸುತ್ತದೆ.

ವೆಬ್ದುನಿಯಾವನ್ನು ಓದಿ