ಡಿ.ಕೆ.ರವಿ ಪ್ರಕರಣ: ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ದಾಖಲಿಸಿದ ಮಹಿಳಾ ಐಎಎಸ್ ಅಧಿಕಾರಿ ಪತಿ

ಶನಿವಾರ, 28 ಮಾರ್ಚ್ 2015 (18:27 IST)
ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಹಲವು ವಿಷಯಗಳನ್ನು ಬಹಿರಂಗಗೊಳಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳಾ ಐಎಎಸ್ ಅಧಿಕಾರಿಯೋರ್ವರ ಪತಿ ಹೈಕೋರ್ಟ್‌ನಲ್ಲಿ ಇಂದು ರಿಟ್ ಅರ್ಜಿ ಸಲ್ಲಿಸಿದ್ದಾರೆ. 
 
ಅರ್ಜಿಯಲ್ಲಿ ಸರ್ಕಾರ ಮತ್ತು ಸಿಐಡಿ ಅಧಿಕಾರಿಗಳ ನಡವಳಿಕೆ ಬಗ್ಗೆ ಆರೋಪಿಸಿರುವ ಅರ್ಜಿದಾರರು, ಸರ್ಕಾರ ತನಿಖೆ ವೇಳೆ ಪಾಲಿಸಬೇಕಾದ ಯಾವುದೇ ರೀತಿಯ ನಿಯಮಗಳನ್ನು ಪಾಲಿಸಿಲ್ಲ. ಅಲ್ಲದೆ ಈ ಹಿಂದೆಯೇ ಗೌಪ್ಯತೆ ಕಾಪಾಡುವಂತೆ ಮನವಿ ಮಾಡಿದ್ದರೂ ಕೂಡ ತನಿಖೆ ವೇಳೆ ದಾಖಲಿಸಿಕೊಂಡಿದ್ದ ಹಲವು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ ಎಂಬುದಾಗಿ ದೂರಿದ್ದಾರೆ. ಇನ್ನು ಈ ಅರ್ಜಿಯ ವಿಚಾರಣೆಯು ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ. 
 
ಪ್ರಕರಣಕ್ಕೆ ಸಂಬಂಧಿಸಿದ ಮಧ್ಯಂತರ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ ಇದೇ ಅರ್ಜಿದಾರರು ಮಂಡಿಸದಂತೆ ತಡೆಯಾಜ್ಞೆ ನೀಡಬೇಕೆಂದು ಕೋರ್ಟ್ ಮೊರೆ ಹೋಗಿದ್ದರಿಂದ ಸರ್ಕಾರ ಮಧ್ಯಂತರ ವರದಿಯನ್ನು ಮಂಡಿಸಿರಲಿಲ್ಲ. ಆದರೆ ಅದಕ್ಕೂ ಮುನ್ನವೇ ಸಿಐಡಿ ಅಧಿಕಾರಿಗಳು ತನಿಖೆ ವೇಳೆಯ ಹಲವು ವಿಷಯಗಳನ್ನು ಮಾಧ್ಯಮಗಳೆದುರು ಬಹಿರಂಗಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಸರ್ಕಾರ ಮತ್ತು ಸಿಐಡಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪವನ್ನು ಮಾಡಿದ್ದು, ರಿಟ್ ಅರ್ಜಿ ಸಲ್ಲಿಸಿದ್ದಾರೆ.
 
2009ನೇ ಸಾಲಿನ ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ.ರವಿ ಅವರು ಎಸಿ, ಸಿಇಓ, ಜಿಲ್ಲಾಧಿಕಾರಿ ಹಾಗೂ ಆಯುಕ್ತ ಸೇರಿದಂತೆ ಇತರೆ ಹುದ್ದೆಗಳನ್ನು ನಿರ್ವಹಿಸಿ ತಮ್ಮ ಆಡಳಿತ ಕಾರ್ಯ ವೈಖರಿಯಿಂದಲೇ ಅಭಮಾನಿಗಳ ಬಳಗವನ್ನು ಸಂಪಾದಿಸಿಕೊಂಡಿದ್ದವರು. ರಾಜ್ಯ ಸರ್ಕಾರವು ಇತ್ತೀಚೆಗೆ ಅವರನ್ನು ವಾಣಿಜ್ಯ ಇಲಾಖೆಯ ಹೆಚ್ಚುವರಿ ಆಯುಕ್ತರನ್ನಾಗಿ ನೇಮಿಸಿತ್ತು. ಈ ವೇಳೆ ಬೆಂಗಳೂರಿನ ದಕ್ಷಿಣ ಭಾಗದ ಆಪಾರ್ಟ್‌ಮೆಂಟ್‌ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು. 

ವೆಬ್ದುನಿಯಾವನ್ನು ಓದಿ