ಡಿ.ಕೆ.ರವಿ ನಿಗೂಢ ಸಾವು ಪ್ರಕರಣ: ಸೋದರತ್ತೆ ಸಾವು

ಶುಕ್ರವಾರ, 20 ಮಾರ್ಚ್ 2015 (12:09 IST)
ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನಿಂದ ಆಘಾತಕ್ಕೊಳಗಾಗಿ ಅಸ್ವಸ್ಥರಾಗಿದ್ದ ರವಿ ಅವರ ಸೋದರತ್ತೆಯೋರ್ವರು ಇಂದು ರಾಜಧಾನಿಯ ವಿಕ್ಟೋರಿಯಾ ಆಸ್ಪತ್ರೆಯೊಂದರಲ್ಲಿ ಸಾವನ್ನಪ್ಪಿದ್ದಾರೆ.
 
ಸಾವನ್ನಪ್ಪಿದ್ದ ರವಿ ಅವರ ಸೋದರತ್ತೆಯನ್ನು ಪದ್ಮಮ್ಮ(48) ಎಂದು ಹೇಳಲಾಗಿದ್ದು, ರವಿ ಅವರ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದರು. ಅಲ್ಲದೆ ಅನ್ನ ನೀರನ್ನು ತ್ಯಜಿಸಿದ್ದರು. ಈ ಹಿನ್ನೆಲೆಯಲ್ಲಿ ತೀವ್ರವಾಗಿ ಅಸ್ವಸ್ಥರಾಗಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಪದ್ಮಮ್ಮ ಕಳೆದ ಹಲವು ದಿನಗಳಿಂದ ಮದುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
 
2009ನೇ ಸಾಲಿನ ಐಎಎಸ್ ಅಧಿಕಾರಿಗಳ ಬ್ಯಾಚ್‌ನಲ್ಲಿ 36ನೇ ರ್ಯಾಂಕ್ ಪಡೆದಿದ್ದ ಹಿರಿಯ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರು ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ, ಕೊಪ್ಪಳ ತಾಲೂಕು ಪಂಚಾಯತ್ ನಲ್ಲಿ ಸಿಇಓ ಹಾಗೂ ಗುಲ್ಬರ್ಗಾದಲ್ಲಿ ಎಸಿಯಾಗಿ ಸೇವೆ ಸಲ್ಲಿಸಿ ತಮ್ಮ ದಕ್ಷ ಆಡಳಿತದ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. 
 
ಇತ್ತೀಚೆಗೆ ಸರ್ಕಾರ ಅವರನ್ನು ರಾಜ್ಯದ ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರನ್ನಾಗಿ ನೇಮಿಸಿತ್ತು. ಅಲ್ಲಿಯೂ ಕೂಡ ಉತ್ತಮ, ದಕ್ಷ ಆಡಳಿತವನ್ನು ತೋರಿದ್ದ ಅಧಿಕಾರಿ ರವಿ, ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕಳೆದ ಸೋಮವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ವೆಬ್ದುನಿಯಾವನ್ನು ಓದಿ