ಡಿ.ಕೆ.ರವಿ ನಿಗೂಢ ಸಾವು ಪ್ರಕರಣ: ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಿದ ಸಿಬಿಐ

ಶನಿವಾರ, 2 ಮೇ 2015 (17:25 IST)
ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೇಂದ್ರದ ಸಿಬಿಐ ಅಧಿಕಾರಿಗಳು ರವಿ ಅವರ ಹುಟ್ಟೂರಿಗೆ ಇಂದು ಭೇಟಿ ನೀಡಿದ್ದು,  ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ. 
 
ಇಂದು ಬೆಳಗ್ಗೆ ಭೇಟಿ ನೀಡಿದ್ದ ಅಧಿಕಾರಿಗಳು ರವಿ ಅವರ ಕುಟುಂಬಸ್ಥರೊಂದಿಗೆ ಸುಮಾರು ಎರಡೂವರೆ ಗಂಟೆಗೂ ಮೀರಿ ವಿಚಾರಣೆ ನಡೆಸಿದರು. ಈ ವೇಳೆ ರವಿ ಅವರು ತಮ್ಮ ಸುಖ ಕಷ್ಟಗಳ ಬಗ್ಗೆ ನಿಮ್ಮೊಂದಿಗೆ ಹೇಳಿಕೊಳ್ಳುತ್ತಿದ್ದರೇ, ಅವರು ನಿಮ್ಮೊಂದಿಗೆ ಹಾಗೂ ಇತರರೊಂದಿಗೆ ನಡೆದುಕೊಳ್ಳುತ್ತಿದ್ದ ವರ್ತನೆ, ಒಡನಾಟ ಹೇಗಿತ್ತು ಎಂದು ಪ್ರಶ್ನಿಸಿರುವ ಅಧಿಕಾರಿಗಳು ನಿಮಗೆ ರವಿ ವಿಚಾರದಲ್ಲಿ ಯಾರ ಮೇಲಾದರೂ ಅನುಮಾನವಿತ್ತೇ ಎಂದೂ ಕೂಡ ಪ್ರಶ್ನಿಸಿದ್ದಾರೆ. 
 
ಐವರು ಅಧಿಕಾರಿಗಳ ತಂಡ ರವಿ ಅವರ ಹುಟ್ಟೂರಾದ ಜಿಲ್ಲೆಯ ಕುಣಿಗಲ್ ತಾಲೂಕಿನ ದೊಡ್ಡಕೊಪ್ಪಲಿಗೆ ತೆರಳಿ ಕುಟುಂಬಸ್ಥರಾದ ರವಿ ಅವರ ಸಹೋದರ ರಮೇಶ್ ಹಾಗೂ ತಾಯಿ ಗೌರಮ್ಮ ಅವರನ್ನು ವಿಚಾರಣೆಗೊಳಪಡಿಸಿದ್ದರು. 
 
ಇದೇ ವೇಳೆ, ರಮೇಶ್ ಅಧಿಕಾರಿಗಳೊಂದಿಗೆ ಪ್ರತಿಕ್ರಿಯಿಸಿ ಮರುಮರಣೋತ್ತರ ಪರೀಕ್ಷೆ ನಡೆಸುತ್ತೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಈ ಹಿಂದೆ ನಡೆಸಿರುವ ವೈದ್ಯಕೀಯ ಅಥವಾ ಮರಣೋತ್ತರ ಪರೀಕ್ಷೆಯ ಯಾವುದೇ ವರದಿ ನಮ್ಮ ಕೈ ಸೇರಿಲ್ಲ. ಆದರೆ ಅಗತ್ಯ ಎಂದೆನಿಸಿದಲ್ಲಿ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಲು ಸಿದ್ಧರಿದ್ದೇವೆ ಎಂಬ ಭರವಸೆ ನೀಡಿದರು.  
 
2009ನೇ ಸಾಲಿನ ಐಎಎಸ್ ಅಧಿಕಾರಿಯಾಗಿದ್ದ ರವಿ ಅವರು ದಕ್ಷಿಣ ವಿಭಾಗದಲ್ಲಿರುವ ಸೆಂಟ್‌ಜಾನ್‌ವುಡ್ ಎಂಬ ಅಪಾರ್ಟ್ಮೆಂಟ್‌ವೊಂದರಲ್ಲಿ ಮಾರ್ಟ್ 16ರಂದು ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.   

ವೆಬ್ದುನಿಯಾವನ್ನು ಓದಿ