ಡಿ.ಕೆ.ರವಿ ನಿಗೂಢ ಸಾವು ಪ್ರಕರಣ: ವಿಪಕ್ಷಗಳಿಂದ ಮುಂದುವರಿದ ಧರಣಿ

ಬುಧವಾರ, 18 ಮಾರ್ಚ್ 2015 (11:48 IST)
ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವು ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಬೇಕೆಂದು ವಿರೋಧ ಪಕ್ಷಗಳು ನಿನ್ನೆಯಿಂದ ನಿರಂತರವಾಗಿ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿರುವ ವಿಧಾನಸಭಾ ಕಲಾಪವು ಸುಗಮವಾಗಿ ನಡೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. 
 
ಪ್ರಸ್ತುತ ವಿರೋಧ ಪಕ್ಷಗಳ ಎಲ್ಲಾ ನಾಯಕರು ವಿಧಾನಸಭೆಯಲ್ಲಿ ಸೇರಿದ್ದು, ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಒಟ್ಟಾಗಿ ಧರಣಿ ಆರಂಭಿಸಿದ್ದಾರೆ. ಅಲ್ಲದೆ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಕಲಾಪವೂ ಕೂಡ ಸಗಮವಾಗಿ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ.
 
ಇನ್ನು ಸಿಬಿಐ ತನಿಖೆಗೊಪ್ಪಸಬೇಕೆಂದು ಒತ್ತಾಯ ಪಡಿಸುತ್ತಿರುವ ವಿಧಾನಸಭಾ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸರ್ಕಾರವು ಈ ಪ್ರಕರಣದಲ್ಲಿ ರಾಜಕೀಯ ತಂತ್ರವನ್ನು ನಡೆಸುತ್ತಿದ್ದು, ಪ್ರಕರಣವನ್ನು ಮುಚ್ಚಿ ಹಾಕುವ ಯತ್ನದಲ್ಲಿದೆ. ಅಲ್ಲದೆ ಸಿಬಿಐಗೆ ವಹಿಸಿದಲ್ಲಿ ಅವರಿಗೆ ಪ್ರತಿಷ್ಠೆ ಹೋಗುವುದೇ ಎಂದು ಪ್ರಶ್ನಿಸಿದ್ದಾರೆ. 
 
ಇನ್ನು ನಮ್ಮಲ್ಲಿಯೇ ದಕ್ಷ ತನಿಖಾಧಿಕಾರಿಗಳಿದ್ದು, ಸಿಐಡಿಯಿಂದ ತನಿಖೆ ನಡೆಸಲಿದ್ದೇವೆ. ಅದರಲ್ಲಿ ನಾವು ತಪ್ಪು ಅಥವಾ ಹಿನ್ನಡೆ ಕಂಡು ಬಂದಲ್ಲಿ ಸಿಬಿಐ ತನಿಖೆಗೊಳಪಡಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ ಇದಕ್ಕೊಪ್ಪದ ವಿರೋಧ ಪಕ್ಷಗಳ ಸದಸ್ಯರು ಅಹೋರಾತ್ರಿ ವಿಧಾನಸಭೆಯಲ್ಲಿಯೇ ಧರಣಿಯನ್ನು ಹಮ್ಮಿಕೊಂಡಿದ್ದರು. 
 
ಈ ನಡುವೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ಮಧ್ಯಪ್ರವೇಶಿಸಿ ಸಂಧಾನಸಭೆ ನಡೆಸಲೆತ್ನಿಸಿದರು. ಆದರೆ ಸಭೆ ವಿಫಲವಾಗಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಧರಣಿಯನ್ನು ಮುಂದುವರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ