ಜನ ಮೆಚ್ಚಿದ ನಾಯಕ ಕಣ್ಮರೆಯಾಗಿ ಇಂದಿಗೆ 11 ದಿನ: ಪುಣ್ಯತಿಥಿ

ಶುಕ್ರವಾರ, 27 ಮಾರ್ಚ್ 2015 (11:45 IST)
ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರು ನಿಗೂಢವಾಗಿ ಸಾವನ್ನಪ್ಪಿ ಇಂದಿಗೆ 11 ದಿನ ಕಳೆದಿರುವ ಹಿನ್ನೆಲೆಯಲ್ಲಿ ಅವರ ಹುಟ್ಟೂರಾದ ಜಿಲ್ಲೆಯ ಕುಣಿಗಲ್ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಇಂದು ಪುಣ್ಯತಿಥಿ ಕಾರ್ಯ ನಡೆಯಿತು.
 
ಈ ಪುಣ್ಯತಿಥಿ ಕಾರ್ಯದಲ್ಲಿ ರವಿ ತಾಯಿ ಗೌರಮ್ಮ, ತಂದೆ ಕೆಂಪಯ್ಯ, ಪತ್ನಿ ಕುಸುಮಾ, ಸಹೋದರ ರಮೇಶ್, ಸಹೋದರಿ ಭಾರತಿ ಸೇರಿದಂತೆ ಇತರರು ಭಾಗವಹಿಸಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ನಿಧನರಾಗಿರುವ ರವಿ ಅವರ ಸಮಾಧಿಗೆ ಹಾಲು ಮತ್ತು ತುಪ್ಪದ ನೈವೇದ್ಯ ಮಾಡಲಾಯಿತು. ಈ ವೇಳೆ ತಾಯಿ ಗೌರಮ್ಮ ಹಾಗೂ ಪತ್ನಿ ಕುಸುಮಾ ಬಹಳ ದುಃಖಿತರಾಗಿದ್ದರು. 
 
ತಮ್ಮ ದಕ್ಷ ಕಾರ್ಯ ವೈಖರಿಯಿಂದಲೇ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ರವಿ ಅವರ ಈ ಕಾರ್ಯಕ್ಕೆ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ, ಕೋಲಾರ ಹಾಗೂ ಕೊಪ್ಪಳ ಜಿಲ್ಲೆಗಳಿಂದಲೂ ಕೂಡ ಅಭಿಮಾನಿಗಳು ಆಗಮಿಸಿದ್ದರು. ಆದರೆ ಸರ್ಕಾರದ ಯಾವೊಬ್ಬ ಅಧಿಕಾರಿ ವರ್ಗ ಅಥವಾ ಸಚಿವರು ಆಗಮಿಸಿರಲಿಲ್ಲ. ಮೂಲಗಳ ಪ್ರಕಾರ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಸಂಸದೆ ಶೋಭಾ ಕರಾಂದ್ಲಾಜೆ ಅವರು ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.  
 
ಇನ್ನು ಕಾರ್ಯಕ್ಕೆಂದು ಅವರ ಸಾವಿರಾರು ಮಂದಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಭದ್ರತೆಗಾಗಿ ಒರ್ವ ಡಿವೈಎಸ್ಪಿ, ಮೂವರು ಇನ್ಪೆಕ್ಟರ್, 7 ಎಸ್ಐ, 13 ಎಎಸ್ಐ ಹಾಗೂ 75 ಮಂದಿ ಪೇದೆಗಳು ಹಾಗೂ ಎರಡು ಕೆಎಸ್ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. 
 
2009ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ರವಿ ಅವರು, ವಿಭಾಗಾಧಿಕಾರಿ, ಜಿಲ್ಲಾ ಪಂ. ಮುಖ್ಯ ಕಾರ್ಯನಿರ್ವಾಹಕ, ಜಿಲ್ಲಾಧಿಕಾರಿ, ಆಯುಕ್ತರು ಹೀಗೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದರು. ಆದರೆ ಇತ್ತೀಚೆಗೆ ರಾಜ್ಯದ ವಾಣಿಜ್ಯ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ರವಿ, ಕಳೆದ ಮಾರ್ಚ್ 16ರಂದು ಬೆಂಗಳೂರು ನಗರದ ದಕ್ಷಿಣ ವಲಯದಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಸ್ತುತ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ