ದಕ್ಷ ಅಧಿಕಾರಿ ಡಿ.ಕೆ.ರವಿ ಆತ್ಮ ಕಾಂಗ್ರೆಸ್‌ನ್ನು ಕಾಡುತ್ತಿದೆ: ಪ್ರಹ್ಲಾದ ಜೋಷಿ

ಶುಕ್ರವಾರ, 24 ಏಪ್ರಿಲ್ 2015 (15:56 IST)
ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಆತ್ಮ ಕಾಂಗ್ರೆಸ್ ಪಕ್ಷವನ್ನು ಬೆಂಬಿಡದೆ ಕಾಡುತ್ತಿದ್ದು, ಬಿಬಿಎಂಪಿ ಚುನಾವಣೆ ನಡೆದರೆ ಕಾಂಗ್ರೆಸ್ ಸೋಲನ್ನು ಅನುಭವಿಸಲಿದೆ. ಅಲ್ಲದೆ ರಾಜ್ಯದ ಮುಖ್ಯಮಂತ್ರಿಗಳು ಮನೆಗೆ ತೆರಳಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಷಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ವ್ಯಂಗ್ಯವಾಡಿದ್ದಾರೆ. 
 
ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನೀಡಿದ್ದ ನಿರ್ದೇಶನದ ಮೇರೆಗೆ ಇಂದು ಹಮ್ಮಿಕೊಂಡಿದ್ದ ಪಕ್ಷದ ಸದಸ್ಯತ್ವ ಸಂಪರ್ಕ ಅಭಿಯಾನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. 
 
ಚುನಾವಣೆ ನಡೆಸಲು ಕಾಲಾವಕಾಶ ನೀಡಬೇಕೆಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠ ಇಂದು ತೀರ್ಪಿತ್ತಿದ್ದು, ಸರ್ಕಾರಕ್ಕೆ ಕಾಲಾವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಜೋಷಿ, ರಾಜ್ಯ ಸರ್ಕಾರವು ಬಿಬಿಎಂಪಿ ವಿಭಜನೆಯ ನೆಪ ಹೇಳಿಕೊಂಡು ಚುನಾವಣೆಯನ್ನು ಮುಂದೂಡುತ್ತಿದೆ. ಆ ಮೂಲಕ ಪ್ರಜೆಗಳ ಮತದಾನದ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಇದು ಸರಿಯಲ್ಲ. ಈ ಹಿಂದೆ ಪ್ರಧಾನಿಯಾಗಿದ್ದ ಕಾಂಗ್ರೆಸ್ ನಾಯಕಿ ಇಂದಿರಾಗಾಂಧಿ ಕೂಡ ಇದೇ ರೀತಿಯ ಪ್ರಯತ್ನ ನಡೆಸಿದ್ದರು. ಪ್ರಸ್ತುತ ಸಿದ್ದರಾಮಯ್ಯನವರೂ ಕೂಡ ಅದನ್ನೇ ಮುಂದುವರಿಸಿದ್ದಾರೆ. ಒಂದು ವೇಳೆ ಬಿಬಿಎಂಪಿ ಚುನಾವಣೆ ಶೀಘ್ರವೇ ನಡೆದಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಲಿದೆ. ಅಷ್ಟೇ ಅಲ್ಲ ಸಿಎಂ ಸಿದ್ದರಾಮಯ್ಯನವರೂ ಕೂಡ ಮನೆಗೆ ತೆರಳಲಿದ್ದಾರೆ ಎಂದು ವ್ಯಂಗ್ಯವಾಡಿದರು. 
 
ಇದೇ ವೇಳೆ, ಹೈಕೋರ್ಟ್ ನೀಡಿರುವ ತೀರ್ಪನ್ನು ನಾವು ಪ್ರಶ್ನಿಸಲಿದ್ದು, ಶೀಘ್ರದಲ್ಲಿಯೇ ಸುಪ್ರೀಂ ಕೋರ್ಟ್‌ನ ಮೆಟ್ಟಿಲನ್ನೂ ಏರಲಿದ್ದೇವೆ ಎಂದು ಉದ್ಗರಿಸಿದರು. 
 
ಬಿಬಿಎಂಪಿ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಬಿಬಿಎಂಪಿಯನ್ನು ಮೂರು ಭಾಗಗಳಾಗಿ ವಿಭಜಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ನಡೆಯಬೇಕಿರುವ ಚುನಾವಣೆಯನ್ನು ಶೀಘ್ರವೇ ನಡೆಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಕಾಲಾವಕಾಶ ನೀಡಬೇಕೆಂದು ಕೋರಿದ್ದ ಸರ್ಕಾರ, ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಇಂದು ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಕಾಲಾವಕಾಶ ನೀಡಿ ಆದೇಶಿಸಿದೆ. 
 
ಈ ಸಂಬಂಧ ಇದಕ್ಕೂ ಮುನ್ನ ಹೈಕೋರ್ಟ್‌ನ ಏಕ ಸದಸ್ಯ ಪೀಠ ಮೇ 31ರ ಒಳಗೆ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಆದರೆ ಅದನ್ನು ವಿಭಾಗೀಯ ಪೀಠ ಇಂದು ರದ್ದುಗೊಳಿಸಿದೆ. 

ವೆಬ್ದುನಿಯಾವನ್ನು ಓದಿ