ಡಿ.ಕೆ.ರವಿ ನಿಗೂಢ ಸಾವು ಪ್ರಕರಣ: ತನಿಖೆಗೆ ಸಹಕರಿಸಲು ಸರ್ಕಾರಕ್ಕೆ ಸಿಬಿಐ ಮನವಿ

ಶುಕ್ರವಾರ, 24 ಏಪ್ರಿಲ್ 2015 (14:18 IST)
ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವು ಪ್ರಕರಣವನ್ನು ತನಿಖೆ ನಡೆಸುತ್ತಿದ್ದು, ಸರ್ಕಾರ ಅಗತ್ಯ ಸೌಲಭ್ಯಗಳೊಂದಿಗೆ ಸಹಕರಿಸಬೇಕೆಂದು ರಾಜ್ಯ ಸರ್ಕಾರವನ್ನು ದೆಹಲಿ ಸಿಬಿಐ ತಂಡ ಮನವಿ ಮಾಡಿದೆ. 
 
ಪ್ರಕರಣದ ತನಿಖೆಗಾಗಿ ನಿನ್ನೆ ಬೆಂಗಳೂರಿಗೆ ಬಂದಿದ್ದ ತಂಡ ತನಿಖೆಯ ಮೊದಲ ಹಂತವಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರನ್ನು ಸಂಪರ್ಕಿಸಿದ್ದರು. ಈ ವೇಳೆ ಮಾತುಕತೆ ನಡೆಸಿದ ಅಧಿಕಾರಿಗಳು, ಸರ್ಕಾರವು ತನಿಖೆಗೆ ಅಗತ್ಯವಾದ ಎಲ್ಲಾ ವಿಶೇಷ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು. ಆ ಮೂಲಕ ಪ್ರಕರಣದ ನಿಸ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದರು. ಅಲ್ಲದೆ ಸೂಕ್ತವಾಗಿ ಸಹಕರಿಸುವಂತೆ ಗೃಹ ಇಲಾಖೆಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ತಂಡವು ಗೃಹ ಇಲಾಖೆ ಕಾರ್ಯದರ್ಶಿಗಳೊಂದಿಗೂ ಮಾತುಕತೆ ನಡೆಸಿತು ಎನ್ನಲಾಗಿದೆ.  
 
ರವಿ ಅವರು 2009ನೇ ಸಾಲಿನಲ್ಲಿ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆಡಳಿತ ಸೇವೆಗೆ ಸೇರಿದ್ದರು. ಎಸಿ, ಜಿಲ್ಲಾಧಿಕಾರಿ ಹಾಗೂ ಸಿಇಒ ಸೇರಿದಂತೆ ಇತರೆ ಉನ್ನತ ಮಟ್ಟದ ಅಧಿಕಾರವನ್ನು ಚಲಾಯಿಸಿದ್ದ ಅವರು, ಉತ್ತಮ ಆಡಳಿತದ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. 
 
ಇತ್ತೀಚೆಗೆ ಅವರನ್ನು ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ನೇಮಿಸಲಾಗಿತ್ತು. ಆದರೆ ಈ ವೇಳೆ ರವಿ ಅವರು ಬೆಂಗಳೂರಿನ ಅಪಾರ್ಟ್ಮೆಂಟ್‌ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ದಕ್ಷ ಅಧಿಕಾರಿಯ ನಿಗೂಢ ಸಾವಿನ ರಹಸ್ಯವನ್ನು ಹೊರ ಹಾಕುವ ಕಾರ್ಯವನ್ನು ಸಿಬಿಐಗೆ ವಹಿಸಿತ್ತು. 
 
ಈ ಹಿನ್ನೆಲೆಯಲ್ಲಿ ಸಿಬಿಐನ ದೆಹಲಿ ತಂಡವು ಪ್ರಕರಣದ ತನಿಖೆಗೆ ಆಗಮಿಸಿದ್ದು, ಮೊದಲ ಹಂತವಾಗಿ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಸಹಕಾರಕ್ಕೆ ಮನವಿ ಮಾಡಿದ್ದಾರೆ. ಪ್ರಕರಣದ ತನಿಖೆಯು ಇಂದಿನಿಂದ ಚುರುಕುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಘಟನೆಯು ಮಾರ್ಚ್ 16ರಂದು ನಡೆದಿತ್ತು. 
 

ವೆಬ್ದುನಿಯಾವನ್ನು ಓದಿ