ಅಂಬರೀಷ್ ಜತೆ ಚರ್ಚಿಸಿ ಸಮಸ್ಯೆ ಪರಿಹರಿಸಿಕೊಳ್ಳುತ್ತೇವೆ: ದರ್ಶನ್

ಶನಿವಾರ, 12 ಮಾರ್ಚ್ 2016 (14:14 IST)
ಪತ್ನಿ ವಿಜಯಲಕ್ಷ್ಮಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಇಂದು ತ್ಯಾಗರಾಜನಗರ ಡಿಸಿಪಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ನಟ ದರ್ಶನ್ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಿದ್ದಾರೆ.
 
ದಕ್ಷಿಣ ವಲಯ ಡಿಸಿಪಿ ಎದುರು ಒಂದು ಗಂಟೆ ಕಾಲ ವಿಚಾರಣೆಗೆ ಹಾಜರಾದ ದರ್ಶನ್ ಅವರಿಗೆ ಪದೇ ಪದೇ ಯಾಕೆ ಈ ರೀತಿ ಗಲಾಟೆ ಮಾಡಿಕೊಳ್ಳುತ್ತಿರಿ ಎಂದು ವಿಚಾರಿಸಿದಾಗ ನಾನು ಮಗನನ್ನು ನೋಡಲು ಆಗಾಗ ಪತ್ನಿ ವಾಸವಾಗಿರುವ ಫ್ಲಾಟ್‌ಗೆ ಹೋಗುತ್ತಿರುತ್ತೇನೆ. ಅದಕ್ಕೆ ಆಗ ನಾನು ಕುಡಿದಿರಲಿಲ್ಲ.  ಭದ್ರತಾ ಸಿಬ್ಬಂದಿ ನನ್ನನ್ನು ತಡೆದಾಗ ಏರು ದನಿಯಲ್ಲಿ ಮಾತನಾಡಿದ್ದು ನಿಜ. ನಿಮಗೂ ಇದಕ್ಕೂ ಸಂಬಂಧವಿಲ್ಲ. ನನ್ನನ್ನು ತಡೆಯಬೇಡಿ ಎಂದು ಗದರಿಸಿದೆ. ಆದರೆ ಅವರ ಮೇಲೆ ಹಲ್ಲೆ ನಡೆಸಿಲ್ಲ. ಮತ್ತೆ ಈ ತಪ್ಪನ್ನು ಮರುಕಳಿಸಲಾರೆ.  ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಹತ್ತುವುದಿಲ್ಲ ಎಂದು ದರ್ಶನ್‌‌ ಪೊಲೀಸರಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ. 
 
ಮುಚ್ಚಳಿಕೆ ಪತ್ರ ಬರೆದುಕೊಟ್ಟ ಹಿನ್ನೆಲೆಯಲ್ಲಿ ದರ್ಶನ್‌ ವಿರುದ್ಧದ ಎರಡು ಎನ್‌ಸಿಆರ್ ‌(ನಾನ್ ಕಾಗ್ನಿಸಿಬಲ್ ರಿಪೋರ್ಟ್) ದೂರುಗಳು ರದ್ದಾಗಿವೆ. ಈ ಮುಚ್ಚಳಿಕೆ ಪತ್ರವನ್ನು ಪೊಲೀಸರು ವಿಜಯಲಕ್ಷ್ಮಿಗೆ ಕಳುಹಿಸಿಕೊಡಲಿದ್ದಾರೆ.
 
ಅಪ್ಪಾಜಿ (ನಟ ಅಂಬರೀಷ್) ನೇತೃತ್ವದಲ್ಲಿ ಸಮಾಲೋಚನೆ ನಡೆಸಿ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳುತ್ತೇನೆ ಎಂದು ದರ್ಶನ್ ತಿಳಿಸಿದ್ದಾರೆ. 
 
ಪತ್ನಿ ನಾನು ಶೂಟಿಂಗ್ ಹೋದಾಗಲೂ ನನ್ನ ಮೇಲೆ ಅನುಮಾನ ಪಡುತ್ತಿದ್ದರು. ನನ್ನ ಮಾತುಗಳನ್ನು ಕೇಳುವುದಿಲ್ಲ. ಕಳೆದ ಬಾರಿ ಜಗಳವಾದಾಗ ಪ್ರತ್ಯೇಕವಾಗಿ ವಾಸಿಸುತ್ತೇನೆ ಆಕೆ ಹೇಳಿದಾಗ ನಾನು ಒಪ್ಪಿಕೊಂಡಿದ್ದೆ. ಮಗನ ಪ್ರೀತಿಯಿಂದ ನನ್ನನ್ನು ದೂರ ಮಾಡುವ ಪ್ರಯತ್ನ ನಡೆಸುತ್ತಿದ್ದಾಳೆ. ಇದೇ ಕಾರಣಕ್ಕೆ ಈ ಹಿಂದೆ ಕೂಡ ಕೋಪಗೊಂಡಿದ್ದೆ. ಮೊನ್ನೆ ನಡೆದದ್ದೂ ಅದೇ ಎಂದು ದರ್ಶನ್ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾರೆ. 
 
ಈ ಎಲ್ಲ ಬೆಳವಣಿಗೆಗಳ ಬಳಿಕ ಸಂಧಾನದ ಮೂಲಕ ಪತಿ-ಪತ್ನಿ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳುವ ಸೂಚನೆ ಲಭಿಸಿದ್ದು ಪ್ರಕರಣ ಸುಖಾಂತ್ಯವಾಗುವ ಲಕ್ಷಣಗಳು ಗೋಚರಿಸುತ್ತಿವೆ. 
 
ಪೊಲೀಸ್ ಠಾಣೆಯಿಂದ ನೇರವಾಗಿ ಅವರು ಅಂಬರೀಷ್ ಮನೆಗೆ ಹೋಗಿದ್ದಾರೆ. 

ವೆಬ್ದುನಿಯಾವನ್ನು ಓದಿ