ಬಂಜೆತನ ನಿವಾರಣೆ ಹೆಸರಿನಲ್ಲಿ ವಂಚನೆ: ಸೃಷ್ಟಿ ತನಿಖೆಗೆ ಆದೇಶಿಸಿದ ಸಚಿವ ಖಾದರ್

ಶನಿವಾರ, 28 ಮಾರ್ಚ್ 2015 (18:32 IST)
ಕಾನೂನು ಬಾಹಿರ ಸೇವೆ ಸಲ್ಲಿಸುವ ಮೂಲಕ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಹಿನ್ನೆಲೆಯಲ್ಲಿ ರಾಜಧಾನಿಯ ಬಸವೇಶ್ವರ ನಗರದಲ್ಲಿನ ಸೃಷ್ಟಿ ಗ್ಲೋಬಲ್ ಮೆಡಿಕೇರ್ ರಿಸರ್ಚ್ ಫೌಡೇಶನ್ ಸಂಸ್ಥೆಯ ಎರಡು ಶಾಖೆಗಳನ್ನು ವಶಪಡಿಸಿಕೊಂಡಿದ್ದು, ಸಂಸ್ಥೆಗೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಸುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಆದೇಶಿಸಿದ್ದಾರೆ. 
 
ಸಂಸ್ಥೆಯ ವಿರುದ್ಧ ಹಲವು ಆರೋಪಗಳಲ್ಲಿರುವ ಹಿನ್ನೆಲೆಯಲ್ಲಿ ಸಚಿವರು ಪ್ರತಿಕ್ರಿಯಿಸಿದ್ದು, ಸಂಸ್ಥೆಯಿಂದ ಸಾರ್ವಜನಿಕರಿಗೆ ಯಾವುದೇ ರೀತಿಯಾಗಿ ಅನ್ಯಾಯವಾಗಬಾರದು. ಆದ್ದರಿಂದ ಸಂಸ್ಥೆಯ ಎಲ್ಲಾ ಶಾಖೆಗಳನ್ನು ಪರಿಶೀಲಿಸಿ ಸಂಸ್ಥೆಯ ಕಾರ್ಪೊರೇಟ್ ವ್ಯವಹಾರಗಳ ಬಗ್ಗೆ ಸೂಕ್ತ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ಪಿ.ಎಸ್.ವಸ್ತ್ರದ ಅವರಿಗೆ ಸೂಚಿಸಿದ್ದಾರೆ.    
 
ಇದೇ ವೇಳೆ, ಇನ್ನು ಮುಂದೆ ಇದೇ ಸಂಸ್ಥೆಯ ಹೆಸರಿನಲ್ಲೇನಾದರೂ ವೈದ್ಯಕೀಯ ಸೇವೆಗಳ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ಜಪ್ತಿ ಮಾಡಿಕೊಳ್ಳಿ ಎಂದೂ ಸೂಚಿಸಿದ್ದಾರೆ. 
 
ಸರ್ಕಾರದ ಆದೇಶದನ್ವಯ ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಂಸ್ಥೆಯ ಎರಡು ಶಾಖೆಗಳಿಗೆ ಬೀಗ ಹಾಕುವ ಮೂಲಕ ವಶಕ್ಕೆ ಪಡೆದಿದ್ದಾರೆ. ನಗರದ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರೊಂದಿಗೆ ಆಗಮಿಸಿದ ಬೆಂಗಳೂರು ಜಿಲ್ಲಾ ಆರೋಗ್ಯ ಇಲಾಖೆಯ ಡಿಹೆಚ್ಒ ಡಾ.ರಜನಿ ಅವರು ಶಾಖೆಗಳನ್ನು ವಶಕ್ಕೆ ಪಡೆದರು. 
 
ಈ ಸಂಸ್ಥೆಯು ಬಂಜೆತನ ನಿವಾರಣೆ ಹೆಸರಿನಲ್ಲಿ ಸಾರ್ವಜನಿಕರನ್ನು ಸಾಕಷ್ಟು ವಂಚಿಸುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಮೋಸಕ್ಕೊಳಗಾಗಿದ್ದ 20ಕ್ಕೂ ಅಧಿಕ ಮಂದಿ ಈ ಸಂಸ್ಥೆ ವಿರುದ್ಧ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಲ್ಲಿ ದೂರು ದಾಖಲಿಸಿದ್ದರು. ಬಳಿಕ ತನಿಖೆ ನಡೆಸಿದ್ದ ಮಂಡಳಿ, ಆರೋಪ ಸಾಬೀತಾಗಿದೆ ಎಂದು ತನ್ನ ವರದಿಯಲ್ಲಿ ತಿಳಿಸಿತ್ತು. ಈ ಸಂಸ್ಥೆಯ ಸಂಸ್ಥಾಪಕ ನಕಲಿ ವೈದ್ಯ ಕೆ.ಟಿ ಗುರುಮೂರ್ತಿ ಅವರಾಗಿದ್ದು, ಈಗಾಗಲೇ ಒಮ್ಮೆ ಜೈಲಿಗೂ ಹೋಗಿ ಬಂದು ಮತ್ತೆ ಅದೇ ತರಹದ ವಂಚನಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಶಾಖೆಗಳನ್ನು ವಶಕ್ಕೆ ಪಡೆಯಲಾಗಿದೆ. 
 
ಸಂಸ್ಥೆಯ ನಿಜಾಂಶ ಬಯಲಾದ ಬಳಿಕ ಸರ್ಕಾರವು ಸಾರ್ವಜನಿಕರು ಯಾರೊಬ್ಬರೂ ಸೃಷ್ಟಿ ಸಂಸ್ಥೆಗೆ ಹೋಗಿ ಚಿಕಿತ್ಸೆ ಪಡೆಯಬಾರದು. ಅಲ್ಲಿ ಕಾನೂನು ಬಾಹಿರವಾಗಿ ಕಳಪೆ ಸೇವೆ ನೀಡಲಾಗುತ್ತಿದೆ ಎಂಬುದಾಗಿ ಸರ್ಕಾರ ಆದೇಶಿಸಿತ್ತು. 

ವೆಬ್ದುನಿಯಾವನ್ನು ಓದಿ