ಬಂಜೆತನ ನಿವಾರಣೆ ಹೆಸರಿನಲ್ಲಿ ವಂಚನೆ: ಸೃಷ್ಟಿ ಗ್ಲೋಬಲ್ ಸಂಸ್ಥೆಗೆ ಅಧಿಕಾರಿಗಳಿಂದ ಮುತ್ತಿಗೆ

ಶನಿವಾರ, 28 ಮಾರ್ಚ್ 2015 (11:04 IST)
ಕಾನೂನು ಬಾಹಿರ ಸೇವೆ ಸಲ್ಲಿಸುವ ಮೂಲಕ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಹಿನ್ನೆಲೆಯಲ್ಲಿ ರಾಜಧಾನಿಯ ಬಸವೇಶ್ವರ ನಗರದಲ್ಲಿರುವ ಸೃಷ್ಟಿ ಗ್ಲೋಬಲ್ ಮೆಡಿಕೇರ್ ಸಂಸ್ಥೆಯನ್ನು ರಾಜ್ಯ ಸರ್ಕಾರದ ಆರೋಗ್ಯ ಇಲಾಖಾಧಿಕಾರಿಗಳು ಇಂದು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 
 
ಸರ್ಕಾರದ ಆದೇಶದನ್ವಯ ಈ ಕಾರ್ಯಾಚರಣೆಯನ್ನು ಬೆಂಗಳೂರು ಜಿಲ್ಲಾ ಆರೋಗ್ಯ ಇಲಾಖೆಯ ಡಿಹೆಚ್ಒ ಡಾ.ರಜನಿ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ಆರೋಗ್ಯಾಧಿಕಾರಿಗಳು ಸಂಸ್ಥೆಯ ಎಲ್ಲಾ ಶಾಖೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ವೇಳೆ ನಗರದ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರೂ ಕೂಡ ಇದ್ದರು.  
 
ಈ ಸಂಸ್ಥೆಯು ಬಂಜೆತನ ನಿವಾರಣೆ ಹೆಸರಿನಲ್ಲಿ ಸಾರ್ವಜನಿಕರನ್ನು ಸಾಕಷ್ಟು ವಂಚಿಸುತ್ತಿತ್ತು. ಅಲ್ಲದೆ ಈ ಸಂಬಂಧ ಮೋಸಕ್ಕೊಳಗಾಗಿದ್ದ 20 ಮಂದಿ ಸಾರ್ವಜನಿಕರು ಈ ಸಂಸ್ಥೆ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ ಕರ್ನಾಟಕ ಮೆಡಿಕಲ್ ಕೌನ್ಸಿಲ್ ತನಿಖೆ ನಡೆಸಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಹಿಂದೆಯೇ ಸಂಸ್ಥೆಯ ನೇತೃತ್ವ ವಹಿಸಿದ್ದ ಕೆ.ಟಿ ಗುರುಮೂರ್ತಿಯನ್ನು ಜೈಲಿಗೆ ಕಳುಹಿಸಲಾಗಿತ್ತು. 
 
ಸಂಸ್ಥೆಯ ನಿಜಾಂಶ ಬಯಲಾದ ಬಳಿಕ ಸರ್ಕಾರವು ಸಾರ್ವಜನಿಕರು ಯಾರೊಬ್ಬರೂ ಕೂಡ ಸೃಷ್ಟಿ ಸಂಸ್ಥೆಗೆ ಹೋಗಿ ಚಿಕಿತ್ಸೆ ಪಡೆಯಬಾರದು. ಅಲ್ಲಿ ಕಾನೂನು ಬಾಹಿರವಾಗಿ ಕಳಪೆ ಸೇವೆ ನೀಡಲಾಗುತ್ತಿದೆ ಎಂದು ಆದೇಶಿಸಿತ್ತು. 

ವೆಬ್ದುನಿಯಾವನ್ನು ಓದಿ