ಡಿನೋಟಿಫಿಕೇಶನ್ ನ್ಯಾಯಾಂಗ ತನಿಖೆಗೆ: ಸಿಎಂ, ಸಿಬಿಐ ತನಿಖೆಗೆ ವಹಿಸಿ: ಶೆಟ್ಟರ್

ಸೋಮವಾರ, 28 ಜುಲೈ 2014 (12:34 IST)
ಅರ್ಕಾವತಿ ಬಡವಾಣೆ ಡಿ ನೋಟಿಫಿಕೇಶನ್ ಪ್ರಕರಣ ವಿಧಾನಸಭೆಯಲ್ಲಿ ಇಂದು ಕೂಡ ಪ್ರತಿಧ್ವನಿಸಿತು. ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ  ನ್ಯಾಯಾಂಗ ತನಿಖೆ ನಡೆಸಲು ರಾಜ್ಯಸರ್ಕಾರ ನಿರ್ಧರಿಸಿತು.  ಬಿಜೆಪಿ ಸದಸ್ಯರ ವಿರೋಧದ ನಡುವೆ ವಿಧಾನಸಭೆಯಲ್ಲಿ ಈ ವಿಷಯವನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಈ ಪ್ರಕರಣದ ತನಿಖೆ ನಡೆಸಲಿದ್ದು,  ತನಿಖೆಯಿಂದ ನಿಮ್ಮ ಬಣ್ಣ ಬಯಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ಆದರೆ ನ್ಯಾಯಾಂಗ ತನಿಖೆಯನ್ನು ವಿರೋಧಿಸಿದ ಬಿಜೆಪಿ ಶಾಸಕರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪಟ್ಟುಹಿಡಿದರು.

]ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿರುವುದರಿಂದ ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯಿಸುತ್ತಿದೆ. 
 ಸಿಬಿಐ ಕಾಂಗ್ರೆಸ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ಅನ್ನುತ್ತಿದ್ದರು. ಸಿಬಿಐ ವಿರುದ್ಧ ಲೇವಡಿ ಮಾಡುತ್ತಿದ್ದರು. ಈಗ ಸಿಬಿಐ ಮೇಲೆ ಬಿಜೆಪಿಗೆ ಇದ್ದಕ್ಕಿದ್ದಂತೆ  ವ್ಯಾಮೋಹ ಬಂದಿದೆ.  ಬಿಜೆಪಿ ಆಡಳಿತದ ಐದು ವರ್ಷದಲ್ಲಿ ಸಿಬಿಐ ಯಾವುದೇ ಪ್ರಕರಣ ಕೈಗೆತ್ತಿಕೊಂಡಿಲ್ಲ. ರಾಜ್ಯದಲ್ಲೇ ಹಲವು ತನಿಖಾ ಸಂಸ್ಥೆಗಳಿವೆ. ನಾವ್ಯಾಕೆ ಸಿಬಿಐ ತನಿಖೆಗೆ ವಹಿಸಬೇಕು ಎಂದು ಸಿಎಂ ಪ್ರಶ್ನಿಸಿದರು. 
 

ಈ ಮಧ್ಯೆ ಮಾತನಾಡಿದ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳೇ ಸ್ವತಃ ಡಿನೋಟಿಫಿಕೇಶನ್ ಅನುಮೋದನೆಗೆ ಸಹಿ ಹಾಕಿದ್ದಾರೆ ಎಂದು ವಾಗ್ದಾಳಿ ಮಾಡಿದರು. ಇದರಿಂದ ಆಕ್ರೋಶಗೊಂಡ ಸಿದ್ದರಾಮಯ್ಯ ಹೌದು ಪರಿಷ್ಕೃತ ಯೋಜನೆಗೆ ನಾನೇ ಸಹಿ ಹಾಕಿದ್ದು. ಅದರಲ್ಲಿ ತಪ್ಪೇನಿದೆ. ನ್ಯಾಯಾಂಗ ತನಿಖೆಯಲ್ಲಿ ನಿಮ್ಮ ಬಣ್ಣ ಬಯಲಾಗಲಿದೆ ಎಂದು ಛೇಡಿಸಿದರು.

 ಆಗ ಬಿಜೆಪಿ ಸದಸ್ಯರು ಘೋಷಣೆ ಕೂಗುತ್ತಾ  ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಡಿನೋಟಿಫಿಕೇಶನ್ ಗದ್ದಲದಿಂದ ಕೋಲಾಹಲದ ವಾತಾವರಣ ಉಂಟಾಯಿತು. ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಿಬಿಐ ತನಿಖೆ ಆಗಲೇಬೇಕು, ಸರ್ಕಾರದ ವಿರುದ್ಧ ಧಿಕ್ಕಾರ, ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗಿದರು.  ಬಿಜೆಪಿ ಸದಸ್ಯರ ಕೋಲಾಹಲದ ನಡುವೆಯೂ 17 ಇಲಾಖೆಗಳ ಬೇಡಿಕೆಗಳ ಅನುಮೋದನೆಗೆ ಕಾಂಗ್ರೆಸ್ ಸರ್ಕಾರ ನಿರ್ಧರಿಸಿತು. ಗದ್ದಲದ ನಡುವೆಯೇ ಧನವಿನಿಯೋಗ ವಿಧೇಯಕ ಸೇರಿ ನಾಲ್ಕು ವಿಧೇಯಕಗಳಿಗೆ ಅಂಗೀಕಾರ ಪಡೆಯಲಾಯಿತು. 

ವೆಬ್ದುನಿಯಾವನ್ನು ಓದಿ