ಜೆಡಿಎಸ್ ಪಕ್ಷದಲ್ಲಿ ಗೊಂದಲ: ಶಾಸಕರ ಸಭೆ ಕರೆಯಲು ದೇವೇಗೌಡರ ನಿರ್ಧಾರ

ಸೋಮವಾರ, 30 ನವೆಂಬರ್ 2015 (15:56 IST)
ಜೆಡಿಎಸ್ ಪಕ್ಷದಲ್ಲಿ ಉದ್ಭವಿಸಿರುವ ಗೊಂದಲ ನಿವಾರಿಸಲು ಶಾಸಕರ ಸಭೆ ಕರೆದು ಅಭಿಪ್ರಾಯ ಕೇಳಲು ದೇವೇಗೌಡರು ಇಚ್ಛಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು ಡಿ. 3ರಂದು ನಡೆಯುವ ಕಾರ್ಯಕಾರಣಿಯಲ್ಲಿ ವಿವಿಧ ರಾಜ್ಯಗಳ 500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗುತ್ತಾರೆಂದು ಅವರು ಹೇಳಿದರು.

ಜೆಡಿಎಸ್ ಪಕ್ಷದಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ಶಾಸಕರ ಸಭೆ ಕರೆದು ಅಭಿಪ್ರಾಯ ಕೇಳುವೆ. ನಾಳೆ ಅಥವಾ ನಾಡಿದ್ದು ಸಭೆ ಕರೆದು ಎಲ್ಲವನ್ನೂ ಅಂತಿಮಗೊಳಿಸುತ್ತೇನೆ. ಸಭೆಯಲ್ಲಿ ಯಾರು ಏನು ಹೇಳುತ್ತಾರೋ ಹೇಳಲಿ. ಶಾಸಕರ ಸಭೆಯಲ್ಲಿ ಎಲ್ಲರೂ ಚರ್ಚಿಸುವುದು ಒಳ್ಳೆಯದು ಎಂದು ದೇವೇಗೌಡರು ಹೇಳಿದರು.  ಸಭೆಯಲ್ಲಿ ಮಾತನಾಡದಂತೆ ಯಾರನ್ನೂ ತಡೆಯೋಲ್ಲ ಎಂದೂ ಗೌಡರು ಹೇಳಿದರು.  

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಜೆಡಿಎಸ್ ಮೈತ್ರಿ ಕುರಿತು ಜೆಡಿಎಸ್ ಶಾಸಕ ಜಮೀರ್ ಅಹ್ಮದ್, ಚೆಲುವನಾರಾಯಣ ಸ್ವಾಮಿ ಮುಂತಾದವರು ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಜತೆ ಮಾತನಾಡಿದ್ದರಿಂದ ಕುಮಾರಸ್ವಾಮಿ ಕಿಡಿಕಾರಿದ್ದರು.

ಹುಡುಗಾಟಿಕೆ ಮಾಡಿದರೆ ಶಿಸ್ತುಕ್ರಮ ಕೈಗೊಳ್ಳುವ ಬೆದರಿಕೆ ಹಾಕಿದ್ದರು.  ಅವರು ಯಾವ ಪಕ್ಷದ ಏಜಂಟ್ ಎಂದು ಜಮೀರ್ ವಿರುದ್ಧ ಪರೋಕ್ಷವಾಗಿ ಕೇಳಿದ್ದರು. ಇದರಿಂದ ಜಮೀರ್  ಮತ್ತು ಕುಮಾರಸ್ವಾಮಿ ನಡುವೆ ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ ಗೊಂದಲ ನಿವಾರಣೆಗಾಗಿ ದೇವೇಗೌಡರು ಸಭೆ ಕರೆದಿದ್ದಾರೆ. 

ವೆಬ್ದುನಿಯಾವನ್ನು ಓದಿ