ಬಿಬಿಎಂಪಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರುವುದು ತಿಳಿದಿದೆ: ದೇವೇಗೌಡ

ಶನಿವಾರ, 5 ಸೆಪ್ಟಂಬರ್ 2015 (14:49 IST)
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಇಂದು ಬಿಬಿಎಂಪಿ ಚುನಾವಣೆಯಲ್ಲಿ ಸೋಲುಂಡಿರುವ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಿತು.

ನಗರದ ಶೇಷಾದ್ರಿಪುರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸಭೆ ಕರೆದಿದ್ದ ಗೌಡರು, ಸೋಲಿನಿಂದ ದೃತಿಗೆಡಬೇಕಿಲ್ಲ. ಭವಿಷ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡಿಸುವ ಯತ್ನ ನಡೆಸಿದ ಅವರು, ಇದೇ ಕಾರ್ಯಕರ್ತರಿಂದಲೇ ಈ ಹಿಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಇವರಿಲ್ಲದೆ ಪಕ್ಷವಿಲ್ಲ ಎಂದರು. 
 
ಇದೇ ವೇಳೆ, ಬಿಬಿಎಂಪಿ ಚುನಾವಣೆಗಾಗಿ ಶಕ್ತಿ ಮೀರಿ ಹೋರಾಟ ನಡೆಸಿದೆವು. ಆದರೆ ನಿರೀಕ್ಷಿತ ಫಲ ಸಿಗಲಿಲ್ಲ. ಅಲ್ಲದೆ ಕೆಲವರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ನೆಲಕಚ್ಚಿದ್ದಾರೆ ಎಂದು ನಮ್ಮನ್ನು ಟೀಕಿಸಿದ್ದಾರೆ. ಆದರೆ ಆ ಬಗ್ಗೆ ಜಯಗಳಿಸಿರುವ ನಮ್ಮ 14 ಮಂದಿ ಬಿಬಿಎಂಪಿ ಸದಸ್ಯರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು. 
 
ಬಿಬಿಎಂಪಿ ಚುನಾವಣೆ ವೇಳೆಯಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದ್ದು, ಅದಕ್ಕೆ ಯಾರು ಕಾರಣರೆಂದು ನನಗೆ ಗೊತ್ತಿದೆ. ಆದರೆ ಅದನ್ನು ಬಹಿರಗಂಗೊಲಿಸಲಾರೆ ಎಂದ ಅವರು, ಮಹಾದಾಯಿಗೆ ಜೆಡಿಎಸ್ ಪಕ್ಷದ ಕೊಡುಗೆ ಏನು ಎಂದು ಪ್ರಶ್ನಿಸುತ್ತಿದ್ದಾರೆ. ಆ ಬಗ್ಗೆ ದಾಖಲೆಗಳನ್ನು ತೆಗೆದು ನೋಡಿದಲ್ಲಿ ತಿಳಿಯುತ್ತದೆ. ಆದರೆ ಶೀಘ್ರದಲ್ಲಿಯೇ ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ತೆರಳಿ ದಾಖಲೆ ಸಮೇತ ತಿಳಿಸುತ್ತೇನೆ ಎಂದು ಗುಡುಗಿದರು.  
 
ಸಭೆಯಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಚಾಮರಾಜಪೇಟೆ ಶಾಸಕರಾದ ಜಮೀರ್ ಅಹ್ಮದ್, ಗೋಪಾಲಯ್ಯ, ವೈ.ಎಸ್.ವಿ.ದತ್ತಾ ಸೇರಿದಂತೆ ಪಕ್ಷದ ಇತರೆ ನಾಯಕರು ಭಾಗಿಯಾಗಿದ್ದರು. 

ವೆಬ್ದುನಿಯಾವನ್ನು ಓದಿ