ಹೆಚ್ಡಿಡಿ-ಪರಮೇಶ್ವರ್ ಭೇಟಿ ಮುಕ್ತಾಯ: ಕಾಂಗ್ರೆಸ್ ಬಿಬಿಎಂಪಿ ಗದ್ದುಗೆ ಏರುವುದು ಖಚಿತ

ಬುಧವಾರ, 2 ಸೆಪ್ಟಂಬರ್ 2015 (16:03 IST)
ಬಿಬಿಎಂಪಿ ಅಧಿಕಾರದ ಗದ್ದುಗೆಗೆ ಬೆಂಬಲ ಸೂಚಿಸಿ ಮಾತುಕತೆಗೆ ಆಹ್ವಾನಿಸಿದ್ದ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ, ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 
 
ನಗರದ ಪದ್ಮನಾಭನಗರದಲ್ಲಿನ ಗೌಡರ ನಿವಾಸದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಗೌಡರೊಂದಿಗೆ ಮಾತುಕತೆ ನಡೆಸಿದ ಪರಮೇಶ್ವರ್, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ತಮ್ಮನ್ನು ಖುದ್ದು ದೇವೇಗೌಡರೇ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಮಾತುಕತೆ ನಡೆಸಿದ್ದು, ಸರ್ಕಾರ ಅಧಿಕೃತವಾಗಿ ತನ್ನ ನಿರ್ಧಾರವನ್ನು ಇಂದೇ ಪ್ರಕಟಿಸಲಿದೆ ಎಂದರು. 
 
ಬಳಿಕ, ದೇವೇಗೌಡರೇ ಖುದ್ದು ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ನೀಡುತ್ತೇನೆ ಎಂದಿದ್ದರು. ಈ ಬಗ್ಗೆ ನಾನು ದೂರವಾಣಿ ಅಥವಾ ಭೇಟಿ ಮಾಡಿ ತಿಳಿದುಕೊಂಡಿರಲಿಲ್ಲ. ಮಾಧ್ಯಮಗಳೇ ಪ್ರಕಟಿಸಿದ ವರದಿಯನ್ನು ಕಣ್ಣಾರೆ ಕಂಡು ಚರ್ಚೆಗೆ ಬಂದಿದ್ದೆ ಎಂದ ಅವರು, ಈ ಸಂಬಂಧ ಅಂತಿಮವಾಗಿ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುತ್ತೇವೆ. ಈ ಬಳಿಕ ಅಧಿಕೃತ ನಿರ್ಧಾರ ಹೊರ ಬೀಳಲಿದೆ ಎಂದರು. ಇದೇ ವೇಳೆ ಕುಮಾರಸ್ವಾಮಿ ಅವರೂ ಕೂಡ ಸಿದ್ದರಾಮಯ್ಯ ಅರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದರು. 
 
ಮೂಲಗಳ ಪ್ರಕಾರ, ಮೇಯರ್ ಸ್ಥಾನವು ಕಾಂಗ್ರೆಸ್‌ಗೆ ಹಾಗೂ ಉಪ ಮೇಯರ್ ಸ್ಥಾನ ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂಬುದಾಗಿ ಒಪ್ಪಂದವಾಗಿದ್ದು, ಸ್ಥಾಯಿ ಸಮಿತಿಗಳಲ್ಲಿನ ಅಧ್ಯಕ್ಷರುಗಳ ಸ್ಥಾನಗಳನ್ನು ಸಮನಾಗಿ ಹಂಚಿಕೆ ಮಾಡಿಕೊಳ್ಳಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.  
 
ಈ ಭೇಟಿ ವೇಳೆ ಪರಮೇಶ್ವರ್ ಅವರೊಂದಿಗೆ ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜೆಡಿಎಸ್ ಶಾಸಕ ಜಮೀರ್ ಅಹ್ಮದ್, ಶರವಣ ಸೇರಿದಂತೆ ಇತರೆ ಗಣ್ಯರು ಹಾಜರಿದ್ದು, ಸಾಥ್ ನೀಡಿದ್ದರು. 
 
ಇನ್ನು ಮೇಯರ್ ಹಾಗೂ ಉಪ ಮೇಯರ್‌ಗಳ ಆಯ್ಕೆ ಸಂಬಂಧ ಚುನಾವಣಾ ದಿನಾಂಕವನ್ನು ನಿಗದಿಪಡಿಸಲು ಪ್ರಾದೇಶಿಕ ಆಯುಕ್ತೆ ಜಯಂತಿ ಅವರು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದು, ಸೆಪ್ಟಂಬರ್ 11ಕ್ಕೆ ಚುನಾವಣೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ