ಅವಾಚ್ಯ ಪದ ಬಳಸದಂತೆ ಪುತ್ರನಿಗೆ ಸಲಹೆ ನೀಡಿದ ಗೌಡರು

ಬುಧವಾರ, 27 ಮೇ 2015 (13:11 IST)
ರಾಜಕೀಯದಲ್ಲಿ ಬೆಳೆಯಬೇಕೆಂದರೆ ಅಗಾಧ ಎನಿಸುವಂತಹ ಪದಗಳನ್ನು ಬಳಸಬಾರದು, ಆದಷ್ಟೂ ಅಂತಹ ಪದಗಳನ್ನು ತಡೆಹಿಡಿಯಬೇಕು ಎಂದು ಮಾಜಿ ಪ್ರಾಧಾನಿ ದೇವೇಗೌಡ ಅವರು ತಮ್ಮ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕಿವಿಮಾತನ್ನು ಹೇಳಿದ್ದಾರೆ. 
 
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನನ್ನ ಪುತ್ರ ಅಥವಾ ಇತರರು ಎಂದು ಪರಿಗಣಿಸಿ ಮಾತನಾಡುತ್ತಿಲ್ಲ. ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಬೇಕಾದಲ್ಲಿ ಚಿಂತಿಸಿ, ಸನ್ನಡತೆಯಿಂದ ಮಾತನಾಡಬೇಕು. ಆಗ ಮಾತ್ರ ರಾಜಕೀಯದಲ್ಲಿ ಬೆಳೆಯಲು ಸಾಧ್ಯ. ಯಾವುದೇ ಸಂಧರ್ಭದಲ್ಲಿಯೂ ಅವಾಚ್ಯ ಪದಗಳನ್ನು ಬಳಸಬಾರದು, ಒಂದು ವೇಳೆ ಅಂತ ಪದಗಳು ಬಾಯಿಗೆ ಬಂದರೂ ಕೂಡ ಅವುಗಳನ್ನು ತಡೆಹಿಡಿಯಬೇಕು ಎನ್ನುವ ಮೂಲಕ ತಮ್ಮ ಪುತ್ರ ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಸಲಹೆ ನೀಡಿದರು. 
 
ಇನ್ನು ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಬಹುಕೋಟಿ ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ದಿನದ ಹಿಂದೆ ಪ್ರತಿಕ್ರಿಯಿಸಿದ್ದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ, ದೇವೇಗೌಡ ಅವರ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳಾಗುತ್ತಿದ್ದರೂ ಕೂಡ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದನ ಕಾಯುತ್ತಿದ್ದಾರೆಯೇ ಎಂದಿದ್ದರು. ಈ ಹಿನ್ನೆಲೆಯಲ್ಲಿ ಗೌಡರು ಸಲಹೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ