ಜೆಡಿಎಸ್‌ ಭಿನ್ನಮತೀಯರಿಗೆ "ಡೋಂಟ್‌ ಕೇರ್‌': ದೇವೇಗೌಡ

ಭಾನುವಾರ, 25 ಜನವರಿ 2015 (12:22 IST)
ಜೆಡಿಎಸ್‌ ಭಿನ್ನಮತೀಯರಿಗೆ "ಡೋಂಟ್‌ ಕೇರ್‌' ಎಂದಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು, "ಇನ್ನುಮುಂದೆ ಮನವೊಲಿಕೆ ಇಲ್ಲ. ಪಕ್ಷ ಕಟ್ಟಲು ಇಷ್ಟ ಇದ್ದರೆ ಜತೆಗೂಡಿ, ಇಲ್ಲವೇ ನಿಮ್ಮ ದಾರಿಗೆ ನಿಮಗೆ' ಎಂಬ ಸಂದೇಶ ರವಾನಿಸಿದ್ದಾರೆ.
 
ಪಕ್ಷದಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕುವವರು ನಮಗೆ ಬೇಡ. ಅಂಥವರನ್ನು ಪಕ್ಷದಿಂದ ಹೊರಹಾಕುವ ಕೆಲಸ ನಾವೇ ಮಾಡುತ್ತೇವೆ. ಮುಕ್ತ ಮನಸ್ಸಿನಿಂದ ಪಕ್ಷ ಕಟ್ಟುವವರಿಗೆ ಮಾತ್ರ ಅವಕಾಶ. ಯಾರೋ ಒಬ್ಬಿಬ್ಬರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದೂ ಅವರು ತಿರುಗೇಟು ನೀಡಿದ್ದಾರೆ.
 
ಶನಿವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಸಮಾವೇಶ ಹಾಗೂ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಕಚೇರಿ ಕಿತ್ತುಕೊಳ್ಳಬಹುದು. ಆದರೆ, ನಿಮ್ಮ ಹೃದಯದಲ್ಲಿ ಪಕ್ಷ ಶಾಶ್ವತವಾಗಿ ನೆಲೆಸಿದೆ ಎಂಬುದನ್ನು ಸಾಬೀತುಪಡಿಸಿ. ಬೀದಿಯಲ್ಲಿ ನಿಂತಾದರೂ ಪಕ್ಷ ಕಟ್ಟೋಣ ಎಂದು ಮುಖಂಡರು ಹಾಗೂ ಕಾರ್ಯಕರ್ತರಿಗೆ ಕರೆ ನೀಡುವ ಮೂಲಕ ಪಕ್ಷ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಿದರು.
 
ಜೆಡಿಎಸ್‌ ಕಚೇರಿಯನ್ನು ಕಾಂಗ್ರೆಸ್‌ ಬಲವಂತದಿಂದ ಕಿತ್ತುಕೊಳ್ಳುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ. ಪಕ್ಷಕ್ಕೆ ಕಟ್ಟಡ ಇಲ್ಲದಂತೆ ಮಾಡುವುದು ಅವರ ಉದ್ದೇಶ ಎಂಬುದನ್ನು ಸಮಾವೇಶದಲ್ಲಿ ಹೆಚ್ಚಾಗಿ ಬಿಂಬಿಸುವ ಪ್ರಯತ್ನ ನಡೆಯಿತು.
 
ಯಾವುದರ ಬಗ್ಗೆಯೂ ವ್ಯಾಮೋಹವಿಲ್ಲ: ಮೊದಲಿಗೆ ಮಾತನಾಡಿದ ದೇವೇಗೌಡರು, ನನಗೆ ಯಾವುದರ ಬಗ್ಗೆಯೂ ವ್ಯಾಮೋಹವಿಲ್ಲ. ಆದರೆ, ನಾನು ಸತ್ತ ಮೇಲೂ ಪಕ್ಷ ಉಳಿಯಬೇಕು ಎಂಬ ವ್ಯಾಮೋಹ ಇದೆ. ಪಕ್ಷ ನನಗೆ ತಾಯಿ ಸಮಾನ. ಇದು ಒಂದು ವ್ಯಕ್ತಿಯ ಪಕ್ಷವಲ್ಲ. ಲಕ್ಷಾಂತರ ಕಾರ್ಯಕರ್ತರ ಪಕ್ಷ ಎಂದರು.
 
ಪಕ್ಷದ ಶಕ್ತಿ ನೀವು. ನೀವಿದ್ದರೆ ಪಕ್ಷ. ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ. ಸದಸ್ಯತ್ವ ಮಾಡಿಸದಿದ್ದರೆ ಯಾರೇ ಆಗಲಿ ನಾನೇ ಪಕ್ಷದಿಂದ ಒದ್ದು ಹೊರಗೆ ಹಾಕ್ತೇನೆ. ಇದು ಟಿಕೆಟ್‌ ಹರಿಯುವ ಕೆಲಸವಲ್ಲ, ಪಕ್ಷದ ಕೆಲಸ ಮಾಡುವವರು ಮಾತ್ರ ಇರಬಹುದು. ಕಾಟಾಚಾರಕ್ಕೆ ಸದಸ್ಯತ್ವ ಅಭಿ ಯಾನ ಮಾಡಬಾರದು ಎಂದು ತಾಕೀತು ಮಾಡಿದರು.
 
ಮರ್ಯಾದೆ ಇದ್ದರೆ ಕಚೇರಿ ಜಾಗ ಖಾಲಿ ಮಾಡಲಿ ಎಂದು ಮಹಾನುಭಾವರು ಹೇಳುತ್ತಾರೆ. ನಾನು ಮರ್ಯಾದೆಯನ್ನು ಇವರಿಂದ ಕಲಿಯಬೇಕಿಲ್ಲ. ನ್ಯಾಯಾಲಯ ಬಿಟ್ಟುಕೊಡಬೇಕು ಎಂದರೆ ಈ ಸಮಾವೇಶದಿಂದಲೇ ಹೋಗಿ ಮೇಜು ಕುರ್ಚಿ ಎತ್ತಿಕೊಂಡು ಹೊರಬರುತ್ತೇನೆ. ನಾನು ಯಾರಿಂದಲೂ ಪಾಠ ಕಲಿಯಬೇಕಿಲ್ಲ. ನನ್ನ ಪಕ್ಷ ಕಾಪಾಡಲು ಕಾರ್ಯಕರ್ತರ ಪಡೆಯಿದೆ. ನಾನು ಬಿಪಿಎಲ್‌ ಕಾರ್ಡ್‌ ಹೋಲ್ಡರ್‌ ಅಲ್ಲ ಎಂದು ಗೌಡರು ಹೇಳಿದರು.
 
ಪಕ್ಷದ ಕಚೇರಿ ಕಿತ್ತುಕೊಳ್ಳುತ್ತಿದ್ದಾರೆ ಎಂದಾಗ ರಾಜ್ಯದ ಮೂಲೆ ಮೂಲೆಯಿಂದ ದೂರವಾಣಿ ಕರೆ ಮಾಡಿ ನಾವೆಲ್ಲರೂ ಒಂದೊಂದು ಇಟ್ಟಿಗೆ ತಂದು ಪಕ್ಷದ ಕಟ್ಟಡ ಕಟೆ¤àವೆ. ಪ್ರತಿ ತಾಲೂಕಿನಿಂದಲೂ ಚಂದಾ ಎತ್ತಿ ಹಣ ಕೊಡ್ತೇವೆ ಎಂದು ಹೇಳಿದರು. ಅವರಿಗೆ ನಾನು ತಲೆಬಾಗಿ ನಮಸ್ಕಾರ ಮಾಡುತ್ತೇನೆ ಎಂದರು. ಕುಮಾರಸ್ವಾಮಿ ನೊಂದಿದ್ದಾರೆ. ಅದಕ್ಕೆ ಯಾರು ಕಾರಣ ಎಂಬುದು ಗೊತ್ತಿದೆ. ಮುಸ್ಲಿಂ ನಾಯಕರೊಬ್ಬರು ತಮಗೆ ಪತ್ರ ಬಂದಿಲ್ಲ. ಉರ್ದುವಿನಲ್ಲಿ ಪತ್ರ ಬರೆದಿದ್ದರೆ ಅರ್ಥವಾಗುತ್ತಿತ್ತು ಎಂದೆಲ್ಲಾ ಹೇಳುತ್ತಾರೆ. ಇಂಥವರನ್ನು ನಾನು ಸಾಕಷ್ಟು ನೋಡಿದ್ದೇನೆ ಎಂದು ಹೇಳಿದರು.
 
ತಪ್ಪಾಗಿದ್ದರೆ ತಿದ್ದಿಕೊಳ್ಳುವೆ- ಕುಮಾರಸ್ವಾಮಿ: ನಂತರ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ಜೆಡಿಎಸ್‌ಗೆ ಭವಿಷ್ಯವಿಲ್ಲ. ಜೆಡಿಎಸ್‌ ತಲೆ ಎತ್ತಲು ಬಿಡುವುದಿಲ್ಲ ಎಂದು ಹೇಳಿರುವವರಿಗೆ ಸವಾಲು ಎಂಬಂತೆ ಪಕ್ಷ ಕಟ್ಟಲು ತೀರ್ಮಾನಿಸಿದ್ದೇನೆ. ಇದಕ್ಕಾಗಿಯೇ ನನ್ನ ಎಲ್ಲ ಚಟುವಟಿಕೆಗಳನ್ನೂ ಬಂದ್‌ ಮಾಡಿಕೊಂಡಿದ್ದೇನೆ. ಸದಸ್ಯತ್ವ ಅಭಿಯಾನ ನನ್ನ ಕ್ಷೇತ್ರದಿಂದಲೇ ಆರಂಭಿಸುತ್ತೇನೆ. ಪ್ರತಿ ಬೂತ್‌ನಲ್ಲಿ 25ರಿಂದ 30 ಜನ ನಿಷ್ಠಾವಂತ ಕಾರ್ಯಕರ್ತರನ್ನು ನೋಂದಣಿ ಮಾಡಿಸೋಣ. ಆ ಮೂಲಕ ಪಕ್ಷವನ್ನು ಸರ್ವಶಕ್ತಗೊಳಿಸುವ ಸಂಕಲ್ಪ ತೊಡೋಣ ಎಂದರು.
 

ವೆಬ್ದುನಿಯಾವನ್ನು ಓದಿ