ಮತಗಟ್ಟೆಯ ಬಳಿಯೇ ಭೋಜನ ವ್ಯವಸ್ಥೆ: ಕ್ರಮಕ್ಕೆ ಮುಂದಾಗದ ಅಧಿಕಾರಿಗಳು

ಶುಕ್ರವಾರ, 29 ಮೇ 2015 (12:26 IST)
ಮತದಾರರಿಗೆ ಮತಗಟ್ಟೆ ಬಳಿಯೇ ಭೋಜನ ಕೂಟ ಏರ್ಪಡಿಸಿರುವ ಗ್ರಾಮ ಪಂಚಾಯತ್ ಚುನಾವಣಾ ಅಭ್ಯರ್ಥಿಗಳು ರಾಜಾರೋಷವಾಗಿ ಮತಕ್ಕೆ ಗಾಳ ಹಾಕಲು ಯತ್ನಿಸಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೋಥಳಿ ಗ್ರಾಮದಲ್ಲಿ ನಡೆದಿದೆ. 
 
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಇಬ್ಬರು ಅಭ್ಯರ್ಥಿಗಳು ಈ ರೀತಿಯಾದ ಭೋಜನ ವ್ಯವಸ್ಥೆ ಏರ್ಪಡಿಸಿದ್ದಾರೆ ಎನ್ನಲಾಗಿದ್ದು, ಅಭ್ಯರ್ಥಿಗಳ ಸಂಪೂರ್ಣ ವಿವರ ತಿಳಿದು ಬಂದಿಲ್ಲ. ಇಲ್ಲಿನ ಮತಗಟ್ಟೆ ಬಳಿಯಲ್ಲಿಯೇ ಪೆಂಡಾಲ್ ಹಾಕಿದ್ದ ಅಭ್ಯರ್ಥಿಗಳ ಬೆಂಬಲಿಗರು ಉಪ್ಪಿಟ್ಟು, ಅನ್ನ ಮತ್ತು ಸಾಂಬರ್‌ನ್ನು ಮತದಾರರಿಗೆ ವಿತರಿಸುತ್ತಿದ್ದರು. ಅಲ್ಲದೆ ತಮ್ಮ ಅಭ್ಯರ್ಥಿಗಳೇ ಮತ ಚಲಾಯಿಸುವಂತೆ ಸೂಚಿಸುತ್ತಿದ್ದರು. ಈ ವೇಳೆ ಮಾಧ್ಯಮಗಳ ಕ್ಯಾಮರಾಗಳು ಸ್ಥಳ ಪ್ರವೇಶ ಮಾಡುತ್ತಿದ್ದಂತೆ ಭೋಜನ ವಿತರಣೆಗೆ ಬಳಸಲಾಗುತ್ತಿದ್ದ ಪ್ಲಾಸ್ಟಿಕ್‌ ತಟ್ಟೆ ಹಾಗೂ ಲೋಟಗಳನ್ನು ಬಚ್ಚಿಟ್ಟರು. ಆದರೆ ಕ್ಯಾಮರಾಗಳು ಮರೆಯಾದ ಬಳಿಕ ಮತ್ತೆ ಆರಂಭಿಸಿದ್ದರು. ಇದು ಮಾಧ್ಯಮಗಳ ಕೆಲ ಕ್ಯಾಮರಾಗಳಲ್ಲಿ ಸೆರೆಯಾಗಿದೆ.  
 
ಇನ್ನು ಮತಗಟ್ಟೆ ಬಳಿಯೇ ಇಂತಹ ಅವ್ಯವಸ್ಥೆ ಕಂಡು ಬಂದರೂ ಕೂಡ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕಾಗಮಿಸಿ ವಿಚಾರಿಸಿಲ್ಲ. ಅಲ್ಲದೆ ಅಭ್ಯರ್ಥಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 

ವೆಬ್ದುನಿಯಾವನ್ನು ಓದಿ