ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ರೇಣುಕಾಚಾರ್ಯ ವಿರುದ್ಧ ತನಿಖೆ ಚುರುಕು

ಬುಧವಾರ, 6 ಮೇ 2015 (12:01 IST)
ಮಾಜಿ ಸಚಿವ, ಬಿಜೆಪಿ ನಾಯಕ ಎಂ.ಪಿ.ರೇಣುಕಾಚಾರ್ಯ ಮತ್ತು ಮೂವರು ಸಹೋದರರ ವಿರುದ್ಧ ದಾಖಲಾಗಿರುವ ಆಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಇಂದಿನಿಂದ ತನಿಖೆ ಚುರುಕುಗೊಳಿಸಿದ್ದಾರೆ. 
 
ಜಿಲ್ಲೆಯ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ತನಿಖೆಗೆ ಆದೇಶಿತ್ತು. ಆದ್ದರಿಂದ ಪ್ರಕರಣದ ತನಿಖೆಯನ್ನು ಜಿಲ್ಲಾ ಲೋಕಾಯುಕ್ತ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದು, ಇಂದಿನಿಂದ ತನಿಖೆ ಆರಂಭಿಸಿದ್ದಾರೆ. 
 
ಜಿಲ್ಲೆಯ ಲೋಕಾಯುಕ್ತ ಇಲಾಖೆಯ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದ್ದು,  ಜೂನ್ 26ರ ಒಳಗೆ ತನಿಖಾ ವರದಿಯನ್ನು ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿರುವ ಲೋಕಾಯುಕ್ತ ಎಸ್‌ಪಿ ಶ್ರೀಧರ್, ತನಿಖೆಯನ್ನು ಚುರುಕುಗೊಳಿಸಿದ್ದಾರೆ. 
 
ಈ ಪ್ರಕರಣವನ್ನು ಗುರುಪಾದಯ್ಯ ಎಂಬುವವರು ದಾಖಲಿಸಿದ್ದರು. ಆ ಎಲ್ಲಾ ದಾಖಲೆಗಳನ್ನು ನಿನ್ನೆ ತಡ ರಾತ್ರಿವರೆಗೂ ಪರಿಶೀಲಿಸಿದ್ದ ತನಿಖಾ ತಂಡ ತನಿಖೆಯನ್ನು ಇಂದಿನಿಂದ ಚುರುಕುಗೊಳಿಸಿದೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಪಿ ಶ್ರೀಧರ್ ಪ್ರತಿಕ್ರಿಯಿಸಿದ್ದು, ಪ್ರಕರಣದ ತನಿಖೆ ಇಂದಿನಿಂದ ಆರಂಭಿಸಲಾಗಿದ್ದು, ನ್ಯಾಯಾಲಯದ ಆದೇಶದಂತೆ ಜೂನ್ 26 ರ ಒಳಗೆ ತನಿಖಾ ವರದಿ ಸಲ್ಲಿಸಲಾಗುವುದು. ಸಮಯಾವಕಾಶದ ಕೊರತೆ ಇದೆ. ಆದ್ದರಿಂದ ಒಂದು ವೇ್ಳೆ ಅಗತ್ಯವಿದ್ದಲ್ಲಿ ನ್ಯಾಯಾಲಯದಿಂದ ಸಮಯಾವಕಾಶ ಕೇಳಲಾಗುವುದು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ