ಡಿ.ಕೆ ರವಿ ನನ್ನ ಪತ್ನಿಗೆ ಕರೆ ಮಾಡಿದ್ದು 44 ಬಾರಿಯಲ್ಲ, ಕೇವಲ 4 ಬಾರಿ: ಮಹಿಳಾ ಐಎಎಸ್ ಅಧಿಕಾರಿ ಪತಿ

ಬುಧವಾರ, 25 ಮಾರ್ಚ್ 2015 (18:29 IST)
ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ನನ್ನ ಪತ್ನಿಗೆ 44 ಬಾರಿ ಕರೆ ಮಾಡಿಲ್ಲ. ಕೇವಲ ನಾಲ್ಕು ಬಾರಿ ಮಾತ್ರ ಕರೆ ಮಾಡಿದ್ದರು ಎಂದು ಮಹಿಳಾ ಐಎಎಸ್ ಅಧಿಕಾರಿಣಿಯ ಪತಿ ಕೋರ್ಟ್‌ಗೆ ತಿಳಿಸಿದ್ದಾರೆ.

ಡಿ.ಕೆ.ರವಿ ಪ್ರಕರಣದ ತನಿಖೆಯಲ್ಲಿ ತಮ್ಮ ಪತ್ನಿಯ ಖಾಸಗಿತನವನ್ನು ಗೌರವಿಸಿ ವಿವರಗಳನ್ನು ಬಹಿರಂಗಪಡಿಸುವುದಕ್ಕೆ ತಡೆ ನೀಡಬೇಕು ಎಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಗುರುವಾರದವರೆಗೆ ವಿವರಗಳನ್ನು ಬಹಿರಂಗಪಡಿಸದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದೆ.

ಅರ್ಜಿದಾರರ ಪರ ವಕೀಲ ಸಜನ್ ಪೂವಯ್ಯ ಅವರಿಗೆ ಲಿಖಿತವಾಗಿ ಸರಕಾರದ ವರದಿಗೆ ಆಕ್ಷೇಪಣೆ ಸಲ್ಲಿಸುವಂತೆ ಕೋರ್ಟ್ ಆದೇಶಿಸಿತು.

ಕೋರ್ಟ್‌ನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ವಾದ ಮಂಡಿಸಿದ ಪೂವಯ್ಯ, ರಾಜ್ಯ ಸರಕಾರದ ಆಧೀನದಲ್ಲಿರುವ ಸಿಐಡಿ ಅಧಿಕಾರಿಗಳು ಮಾಧ್ಯಮಗಳ ಮೂಲಕ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಉದಾಹರಣೆ ನೀಡಿದ ಅವರು, ಡಿ.ಕೆ.ರವಿ ನನ್ನ ಅರ್ಜಿದಾರರ ಪತ್ನಿಗೆ 1 ಗಂಟೆಯ ಅವಧಿಯಲ್ಲಿ 44 ಬಾರಿ ಕರೆ ಮಾಡಿದ್ದರು ಎಂದು ಸಿಐಡಿ ಅಧಿಕಾರಿಗಳನ್ನು ಉದ್ದೇಶಿಸಿ ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತದೆ. ಆದರೆ, ರವಿ ಮಾಡಿರುವುದು ಕೇವಲ ನಾಲ್ಕು ಕರೆಗಳು ಎಂದು ಸ್ಪಷ್ಟಪಡಿಸಿದರು.

ರವಿ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಅರ್ಧ ಬೆಂದ ಮಾಹಿತಿಗಳನ್ನು ಬಿತ್ತರಿಸುವುದಕ್ಕೆ  ತಡೆ ನೀಡಬೇಕು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಸಜನ್ ಪೂವಯ್ಯ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ