ಡಿಕೆ ರವಿ ಅನುಮಾನಾಸ್ಪದ ಸಾವು ಪ್ರಕರಣ: ಮರು ಮರಣೋತ್ತರ ಪರೀಕ್ಷೆ?

ಮಂಗಳವಾರ, 19 ಮೇ 2015 (11:02 IST)
ಅನುಮಾನಾಸ್ಪದವಾಗಿ ಸಾವಿಗೀಡಾದ ಐಎಎಸ್ ಅಧಿಕಾರಿ ಡಿ ಕೆ ರವಿಯವರ ಮರು ಮರಣೋತ್ತರ ಪರೀಕ್ಷೆ ಮಾಡಲು ಸಿಬಿಐ ನಿರ್ಧರಿಸಿದೆ.
 
ಪ್ರಾಥಮಿಕ ತನಿಖೆಯನ್ನು ಮುಗಿಸಿರುವ ಸಿಬಿಐ ತಂಡ, ಇದು ಕೊಲೆಯೋ.? ಆತ್ಮಹತ್ಯೆಯೋ ? ಎಂದು ನಿರ್ಧರಿಸಲು ಸೂಕ್ತ ಸಾಕ್ಷ್ಯ ಸಿಕ್ಕಿಲ್ಲದ್ದ ಕಾರಣ ಹೂತಿರುವ ರವಿಯವರ ಶವವನ್ನು ಮತ್ತೆ ಹೊರತೆಗೆದು ಮರು ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ಮಾಹಿತಿ ಲಭಿಸಿದೆ. 
 
ಸಮಾಧಿಯ ಬಳಿಯೇ ಮರು ಮರಣೋತ್ತರ ಪರೀಕ್ಷೆ ನಡೆಯಲಿದೆ. ದೇಹದ ಮೂಳೆ ಮತ್ತು ಕಿಡ್ನಿಯ ತುಣುಕುಗಳು ವಿಷಪ್ರಾಶನ ಅಥವಾ ಹಲ್ಲೆಯಿಂದ ಸಾವು ಸಂಭವಿಸಿದೆಯೇ ಎನ್ನುವ ಕುರಿತು ಸ್ಪಷ್ಟ ಮಾಹಿತಿ ನೀಡಲಿವೆ.
 
ಪ್ರಾಥಮಿಕ ತನಿಖೆಯಿಂದ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವು ಆತ್ಮಹತ್ಯೆ ಎಂದು ಸಿಬಿಐ ತೀರ್ಮಾನಕ್ಕೆ ಬಂದಿದೆ. ಆದರೆ ರವಿ ಸಾವಿನ ಕುರಿತು ಸಿಬಿಐ ಸದ್ಯಕ್ಕೆ ಮಧ್ಯಂತರ ವರದಿ ಇಲ್ಲವೆ ಅಂತಿಮ ವರದಿ ನೀಡದಿರಲು ತೀರ್ಮಾನಿಸಿದೆ.
 
ಈಗಾಗಲೇ ಈ ಮೊದಲು ರವಿ ಶವ ಪರೀಕ್ಷೆ ನಡೆಸಲಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಂದ ಸಿಬಿಐ ತನಿಖಾ ತಂಡ ಅಗತ್ಯ ಮಾಹಿತಿ ಪಡೆದಿದೆ. ಜತೆಗೆ ತಜ್ಞ ವೈದ್ಯರಿಂದ ಮರು ಮರಣೋತ್ತರ ಪರೀಕ್ಷೆ ನಡೆಸಲು ಸಿಬಿಐ ಮುಂದಾಗಿದೆ. ಅಂತಿಮ ವರದಿ ಬಂದ ನಂತರ ಈ ನಿಗೂಢ ಸಾವಿನ ಪ್ರಕರಣವನ್ನು ಬಹಿರಂಗಗೊಳ್ಳಲಿದೆ ಎಂದು ಸಿಬಿಐ ಮೂಲಗಳು ಖಚಿತಪಡಿಸಿವೆ. ದೆಹಲಿಯ ಏಮ್ಸ್ ವೈದ್ಯಕೀಯ ತಂಡ ರವಿ ಮರು ಮರಣೋತ್ತರ ಶವ ಪರೀಕ್ಷೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.  

ವೆಬ್ದುನಿಯಾವನ್ನು ಓದಿ