ಮಂತ್ರಿ ಮಾಲ್‌ ಆರಂಭ ಯಾವಾಗ ಗೊತ್ತಾ?

ಶನಿವಾರ, 25 ಫೆಬ್ರವರಿ 2017 (20:14 IST)
ಕಳೆದ ಜನೆವರಿ 16ರಿಂದ ಬಂದ್ ಮಾಡಲಾಗಿದ್ದ ನಗರದ ಪ್ರಮುಖ ಮಾಲ್'ಗಳಲ್ಲಿ ಒಂದಾಗಿದ್ದ ಮಂತ್ರಿಮಾಲ್ ನಾಳೆ ಪುನಾರಂಭವಾಗಲಿದೆ. 
ಮಂತ್ರಿಮಾಲ್ ಪುನರಾರಂಭಕ್ಕೆ ಬಿಬಿಎಂಪಿ ಷರತ್ತುಗಳನ್ನು ವಿಧಿಸಿದ್ದು, ಷರತ್ತುಗಳನ್ನು ಪೂರೈಸಿದ ನಂತರ ಪುನರಾರಂಭ ಮಾಡಬಹುದು ಎಂದು ಬಿಬಿಎಂಪಿ ಆಯಕ್ತರು ಹೇಳಿದ್ದಾರೆ.
 
ನಗರದ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್ ಅಡಳಿತ ಮಂಡಳಿ, ಕಟ್ಟಡ ನಿರ್ವಹಣೆ ಬಗ್ಗೆ ಪ್ರತಿ ವರ್ಷವು ವರದಿ ನೀಡಬೇಕು. ಪ್ರತಿ ಎರಡು ವರ್ಷಗಳಿಗೊಮ್ಮೆ ನಿರಕ್ಷೇಪಣಾ ಪತ್ರ ಪಡೆಯಬೇಕು.
 
ಬಿದ್ದಿರುವ ಗೋಡೆಯನ್ನ ಮತ್ತೆ ಹೊಸದಾಗಿ ನಿರ್ಮಾಣ ಮಾಡಬೇಕು. ಗೋಡೆ ಕುಸಿತವಾಗಿರುವ ಕಡೆ ಇರುವ ಬಾಗಿಲುಗಳನ್ನ ಯಾವುದೇ ಕಾರಣಕ್ಕೂ ತೆರೆಯುವಂತಿಲ್ಲ ಎಂದು ಬಿಬಿಎಂಪಿ ಷರತ್ತು ವಿಧಿಸಿದೆ. ಬಿಬಿಎಂಪಿಯ ಸೂಚನೆ ಮೇರೆಗೆ ಮಂತ್ರಿಮಾಲ್ ಶೇ. 80ರಷ್ಟು ಬದಲಾವಣೆ ಮಾಡಿಕೊಂಡಿದ್ದು, ಏನೇ ಆದ್ರೂ ನಾವೇ ಜವಾಬ್ದಾರಿ ಎಂದು ಬರೆದುಕೊಟ್ಟಿದೆ.
 
ಮಂತ್ರಿಮಾಲ್‍ನಲ್ಲಿ ಕೊಳಚೆ ನೀರು ಹರಿದು ಗೋಡೆ ಕುಸಿದಿತ್ತು, ಈಗ ಪೈಪು ಬದಲಿಸಲಾಗಿದೆ. ಮುಂದೆ ಪೈಪು ತುಕ್ಕು ಹಿಡಿಯದಂತೆ `ಆ್ಯಂಟಿ ಕೊರೊಸೀವ್’ ಬಣ್ಣ ಹಚ್ಚಲಾಗಿದೆ. ಬೇರೆ ಕಡೆ ಸ್ಲಾಬ್, ಸಿಮೆಂಟ್, ಕಬ್ಬಿಣ, ಕಟ್ಟಡ ಸಲಕರಣೆ ಗುಣಮಟ್ಟ ಚೆನ್ನಾಗಿವೆ. ಮಂತ್ರಿಮಾಲ್ ಕಟ್ಟಡದ ಎಲ್ಲಾ ಭಾಗವೂ ವಾಣಿಜ್ಯ ಚಟುವಟಿಕೆಗೆ ಸಮರ್ಥವಾಗಿದೆ. 60 ಕಡೆ ಸ್ಯಾಂಪಲ್ ಪರೀಕ್ಷೆ ಮಾಡಿದ್ದು ಕಟ್ಟಡ ಸಂಪೂರ್ಣ ಗಟ್ಟಿಮುಟ್ಟಾಗಿದೆ ಎಂದು ಮಾಲ್ ವರದಿ ತಯಾರಿಸಿದೆ. ವರದಿ ಬಳಿಕ ಹಲವು ಷರತ್ತುಗಳನ್ನ ವಿಧಿಸಿ ಬಿಬಿಎಂಪಿ ಅನುಮತಿ ನೀಡಿದೆ.
 
ಜನವರಿ 16 ರಂದು ಮಂತ್ರಿಮಾಲ್ ಹಿಂಬದಿ ಗೋಡೆ ಕುಸಿದಿತ್ತು. ಬಳಿಕ ತಜ್ಞರ ತಂಡ ರಚನೆ ಮಾಡಿದ್ದ ಬಿಬಿಎಂಪಿ, ವರದಿ ಬಳಿಕ ಕೆಲ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಿತ್ತು. ಇದೀಗ ಬಿಬಿಎಂಪಿ ಸೂಚನೆ ಮೇರೆಗೆ ಬದಲಾವಣೆ ಮಾಡಿಕೊಂಡಿರುವ ಮಂತ್ರಿಮಾಲ್ ಮತ್ತೆ ಕಾರ್ಯರಂಭ ಮಾಡುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ